ಚಿಕ್ಕಬಳ್ಳಾಪುರ:
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಾ ಇದ್ದು, ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಲೇ ಇದ್ದಾವೆ. ಬೆಂಕಿ ದುರಂತಗಳಿಂದ ವ್ಯಕ್ತಿ, ಆಸ್ತಿ- ಪಾಸ್ತಿ, ವಾಹನಗಳನ್ನು ಕಾಪಾಡುವುದೇ ಅಗ್ನಿಶಾಮಕ ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಬೆಂಗಳೂರು ವೃತ್ತದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಖಾಸಗಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಖಾಸಗಿ ಬಸ್ ಸೇರಿದಂತೆ ಎಂಟು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿದೆ.
ಚಿಂತಾಮಣಿ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ನ್ನು ನಿಲ್ಲಿಸಲಾಗಿತ್ತು. ಬಸ್ ಹಿಂಭಾಗದ ದೂರವಾಣಿ ಇಲಾಖೆಗೆ ಸೇರಿದ ಜಾಗದಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಅಪಘಾತ ಮತ್ತು ಇತರರ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿರುವ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಖಾಸಗಿ ಬಸ್‌ಗೆ ತಗುಲಿದ ಬೆಂಕಿ ವ್ಯಾಪಿಸಿ ಅಲ್ಲಿದ್ದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ 8 ಬೈಕ್‌ಗಳು ಕೂಡ ಬಸ್ ಜೊತೆ ಬೆಂಕಿಗಾಹುತಿಯಾಗಿವೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದ್ದು, ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಬೆಂಕಿ ವ್ಯಾಪಿಸದಂತೆ ತಪ್ಪಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದ್ರಿಂದ ದೊಡ್ಡ ಪ್ರಮಾಣದ ಬೆಂಕಿ ದುರಂತ ತಪ್ಪಿದೆ.
ಇನ್ನು ನಿತ್ಯ ಬೆಳಿಗ್ಗೆ 7:00 ಗೆ ಚಿಂತಾಮಣಿ ಇಂದ ಹೊಸಕೋಟೆ ಇಂಡಸ್ಟ್ರಿಯಲ್ ಏರಿಯಾಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದ ಅನ್ನಪೂರ್ಣೇಶ್ವರಿ ಖಾಸಗಿ ಬಸ್ಸನ್ನು ನಗರದ ಬೆಂಗಳೂರು ವೃತ್ತದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ಬಸ್ಸನ್ನು ಚಾಲಕ ನಿಲ್ಲಿಸಿ ಮನೆಗೆ ಹೋಗಿದ್ದ ಎನ್ನಲಾಗಿದೆ. ಆದ್ರೆ ಏಕಾಏಕಿ ಖಾಸಗಿ ಬಸ್‌ಗೆ ಬೆಂಕಿ ತಗುಲಿದೆ. ಸದ್ಯ ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.