ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಅಭಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರೋಶದ ಕಟ್ಟೆಹೊಡೆದಿತ್ತು. ಕುಟುಂಬಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ಮೃತಪಟ್ಟ ವ್ಯಕ್ತಿಯ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ರು. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಚಿಕ್ಕಬಳ್ಳಾಪುರ ತಾಲೂಕಿನ ಆಕಲಹಳ್ಳಿ ಗ್ರಾಮದ ಬೀರಪ್ಪ ಎಂಬುವವರು ಅಭಯ ಆಸ್ಪತ್ರೆಯಲ್ಲಿ ಟಿಬಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದೆರ ವೈದ್ಯರ ನಿರ್ಲಕ್ಷ್ಯದಿಂದ ರೂಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡ್ತಾ ಇದ್ದಾರೆ. ಕುಟುಂಬಸ್ಥರ ಪ್ರಕಾರ, ಆಸ್ಪತ್ರೆಯ ವೈದ್ಯರು ಬೀರಪ್ಪ ಅವರಿಗೆ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆಗೆ ಸುಮಾರು 13 ಲಕ್ಷ ಬಿಲ್ ಮಾಡಿದ್ದಾರೆ. ಇದಾದ ಬಳಿಕ ಬೀರಪ್ಪ ಅವರ ಆರೋಗ್ಯ ಗಂಭೀರವಾಗಿದೆ ಹೀಗಾಗಿ ಅಭಯ ಆಸ್ಪತ್ರೆಯ ವೈದ್ಯರು ಅವರನ್ನು ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬೀರಪ್ಪ ಇಂದು ಸಾವನ್ನಪ್ಪಿದ್ದಾರೆ.
ರೋಗಿಯ ಸಾವಿಗೆ ಅಭಯ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತಾ ಕುಟುಂಬಸ್ಥರು ಆರೋಪ ಮಾಡ್ತಾ ಇದ್ದು, ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಸ್ಪತ್ರೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ರು. ಇನ್ನು ಕುಟುಂಬಸ್ಥರ ಆಕ್ರೋಶದಿಂದ ಆಸ್ಪತ್ರೆಯ ಎದುರು ಗಲಾಟೆಯ ಸನ್ನಿವೇಶ ಸೃಷ್ಟಿಯಾಗಿತ್ತು. ಆಸ್ಪತ್ರೆಯ ಗೇಟ್ನಲ್ಲಿ ನೂಕುನಗ್ಗಲು ಪ್ರಾರಂಭವಾಗಿದ್ದು, ಪೊಲೀಸರು ಕುಟುಂಬಸ್ಥರನ್ನು ನಿಯಂತ್ರಿಸಲು ಹರಸಾಹಸವೇ ಪಟ್ಟರು.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೇ, ಅತಿಯಾದ ಬಿಲ್ ವಿಧಿಸುವ ಆರೋಪಗಳು ಈ ಹಿಂದೆಯೂ ಕೇಳಿಬಂದಿವೆ. ಈ ಘಟನೆಯಿಂದಾಗಿ ಅಭಯ್ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ. ಈ ದುರ್ಘಟನೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವ್ಯವಸ್ಥೆಯ ಮೇಲೆ ಹಲವು ಪ್ರಶ್ನೆಗಳನ್ನು ಎತ್ತಿದೆ. ರೋಗಿಗಳ ಜೀವದ ಜೊತೆಗೆ ಆಟವಾಡುವ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ರು.