DAKSHINA KANNADA NEWS: ಪುತ್ತೂರು ನಗರದ ಹೊರವಲಯದ ಚಿಕ್ಕಪುತ್ತೂರು ಎಂಬಲ್ಲಿ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ ನೆನ್ನೆ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಚಿಕ್ಕಪುತ್ತೂರಿನ ನಿವಾಸಿ, ಪುತ್ತಿಲ ಪರಿವಾರದ ಮುಖಂಡ ಚಿಂತನ್ ಅವರ ಪತ್ನಿ ರೇಷ್ಮಾ (28). ರೇಷ್ಮಾ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಈಗಾಗಲೇ ದಂಪತಿಗೆ ಒಂದು ಪುಟ್ಟ ಮಗಳು ಕೂಡ ಇದ್ದಾಳೆ.
ಮೂಲತಃ ಸುರತ್ಕಲ್ ನಿವಾಸಿಯಾದ ರೇಷ್ಮಾ, ನಾಲ್ಕು ವರ್ಷಗಳ ಹಿಂದೆ ಚಿಂತನ್ ಅವರಿಗೆ ವಿವಾಹವಾಗಿದ್ದರು. ಈ ಕುಟುಂಬವು ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿತ್ತು. ಇನ್ನು ರೇಷ್ಮಾ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಕುಟುಂಬದ ಸದಸ್ಯರು ಮತ್ತು ಸ್ಥಳೀಯರು ಈ ಸುದ್ದಿ ಕೇಳಿ ಶೋಕಸಂತಪ್ತರಾಗಿದ್ದಾರೆ.
ಇನ್ನು ಈ ಘಟನೆ ಸಂಬಂಧ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.