ಪಾವಗಡ :
ಪಾವಗಡ ಅಂದ್ರೆ ಬರದ ನಾಡು ಅಂತಾನೇ ಫೇಮಸ್. ಇಂತಹ ಬರದ ನಾಡಲ್ಲಿ ಅಭಿವೃದ್ಧಿ ಅನ್ನೋದು ಇಂದಿಗೂ ಮರೀಚಿಕೆ. ಇಲ್ಲಿ ಗೆಲ್ಲುತ್ತಿರೋ ಪ್ರತಿನಿಧಿಗಳ ನಿರ್ಲಕ್ಷ್ಯವೋ, ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ ಎಷ್ಟೇ ಯೋಜನೆಗಳು ಬರುತ್ತಿದ್ದರೂ ಇಂದಿಗೂ ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಸೋಲಾರ್ ಪಾರ್ಕ್ ನಿರ್ಮಿಸಿದರೂ ಕೂಡ ಪಾವಗಡಕ್ಕೆ ಪ್ರಯೋಜನವಾಗಿಲ್ಲ ಅನ್ನೋ ಮಾತು ಕೇಳಿಬರ್ತಿದೆ. ಇದರ ನಡುವೆ ಈ ಬಿಸಿಲ ನಾಡಿನಲ್ಲಿ ಭೂಗಳ್ಳರ ಹಾವಳಿ ಇಂದಿಗೂ ನಿಂತಿಲ್ಲ. ಭೂಗಳ್ಳರ ಹಾವಳಿ ಬರೀ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ ನಗರಕ್ಕೂ ತಲುಪಿದೆ. ಪಾವಗಡದ ಎಷ್ಟೋ ಐತಿಹಾಸಿಕ ಸ್ಮಾರಕ ಜಾಗಗಳ ಜೊತೆಗೆ ಕಲ್ಯಾಣಿಗಳು, ಸರ್ಕಾರಿ ಖರಾಬು ಭೂಮಿಗಳು ಭೂಗಳ್ಳರಿಂದ ಕಬಳಿಕೆಯಾಗ್ತಿವೆ.
ಪಾವಗಡದಲ್ಲಿರುವ ಸರ್ಕಾರಿ ಜಾಗಗಳು ಕೂಡ ಭೂಗಳ್ಳರ ಕೆಂಗಣ್ಣಿಗೆ ಬಿದ್ದು ಮಂಗ ಮಾಯವಾಗ್ತಿವೆ. ಪಾವಗಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒತ್ತುವರಿ ಎಂಬುದು ಎಗ್ಗಿಲ್ಲದೆ ನಡೆತಾ ಇದೆ. ಭೂಗಳ್ಳರ ಹಾವಳಿಗೆ ಎಷ್ಟೋ ಜನ ಬಡವರು ತಮ್ಮ ಜಮೀನು, ಕೂಲಿ ನಾಲಿ ಮಾಡಿ ಕೂಡಿಟ್ಟಿದ್ದ ಹಣ ಕಳೆದುಕೊಂಡಿದ್ದಾರೆ. ಪಾವgಡದಲ್ಲಿ ಎಲ್ಲೆಂದರಲ್ಲಿ ಲೇಔಟ್ಗಳ ಹಾವಳಿ ಶುರುವಾಗ್ತಿದೆ. ಇನ್ನು ಇಂತಹ ಒತ್ತುವರಿ ವಿಚಾರವಾಗಿ ಹಲವರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಪಾವಗಡದಲ್ಲಿ ತಲೆ ಎತ್ತುತ್ತಿರುವ ಲೇಔಟ್ಗಳಿಂದ ಸರ್ಕಾರಿ ಖರಾಬು ಜಮೀನು ನಾಶವಾಗಿ ಭೂಗಳ್ಳರ ಪಾಲಾಗ್ತಿವೆಯಂತೆ.
ಲೇಔಟ್ಗಳ ನಿರ್ಮಾಣಕ್ಕಾಗಿ ಪ್ರಭಾವಿ ವ್ಯಕ್ತಿಗಳು ಖರಾಬು ಜಮೀನಿನ ಮೇಲೆ ಕಣ್ಣಿಟ್ಟೀದ್ದಾರಂತೆ. ಅದಕ್ಕಾಗಿ ಪಾವಗಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲೆ ಕಣ್ಣಿಟ್ಟು ಭೂಮಿ ಖರೀದಿಸಿ ಆ ಮೂಲಕ ಸರ್ಕಾರದ ಖರಾಬು ಜಾಗವನ್ನು ಲೂಟಿ ಮಾಡ್ತಿದಾರೆ ಎನ್ನಲಾಗ್ತಿದೆ. ಇಲ್ಲಿರುವ ಬಹುತೇಕ ಲೇಔಟ್ಗಳಲ್ಲಿ ಶೇಕಡ 100ರಷ್ಟಲ್ಲಿ 80 ರಷ್ಟು ಭೂಮಿ ಖರಾಬಿನಿಂದ ಕೂಡಿದೆಯಂತೆ. ಭೂಗಳ್ಳರು ಖರಾಬು ಜಮೀನು ಒತ್ತುವರಿ ಮಾಡಿಕೊಂಡು ಲೇಔಟ್ ಕಟ್ಟುವ ಮೂಲಕ ಬ್ರೋಚರ್ ಗಳನ್ನು ನೀಡಿ ನಿವೇಶನ ಕೊಳ್ಳುವಂತೆ ಡ್ರಾಮ ಕ್ರಿಯೆಟ್ ಮಾಡ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವೆಂಕಟಾಪುರ ರಸ್ತೆಯಲ್ಲಿ ಸರ್ವೆ ನಂಬರ್ 131/1ಎ1 ನಡೆಯುತ್ತಿರುವ ಲೇಔಟ್ ನಲ್ಲಿ ಸುಮಾರು 38 ರಿಂದ 40 ಎಕರೆ ಖರಾಬು ಜಮೀನು ಎಂದು ದಾಖಲೆಗಳು ಹೇಳ್ತಿವೆಯಂತೆ. ಈ ಸಂಬಂಧವಾಗಿ ಸಾಮಾಜಿಕ ಹೋರಾಟಗಾರರು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ.
ಪಾವಗಡದಲ್ಲಿನ ಇಂತಹ ಪರಿಸ್ಥಿತಿಯಲ್ಲಿ ಲೇಔಟ್ನಲ್ಲಿ ನಿವೇಶನ ಕೊಳ್ಳುವ ಮುನ್ನ ಗ್ರಾಹಕರೇ ಒಮ್ಮೆ ಎಚ್ಚರ. ನೀವು ಕೊಳ್ಳಲು ಹೊರಟಿರುವ ನಿವೇಶನಗಳು ಸಂಪೂರ್ಣ ಖರಾಬು ಜಮೀನಿನಿಂದ ನಿರ್ಮಾಣವಾಗಿವೆ. ಯಾವುದೇ ಜಮೀನು, ಲೇಔಟ್ ಆಗಲಿ ಸರ್ಕಾರ ನಿಯಮ ಆಗಲಿ ಎಂದಿಗೂ ಬದಲಾಗೊಲ್ಲ. ಜಮೀನು ಕೊಂಡು ಕೊಳ್ಳುವ ಮುನ್ನ ಹಳೆಯ ಕಡತಗಳನ್ನು ಒಮ್ಮೆ ನೋಡುವುದು ಸೂಕ್ತ. ಇಲ್ಲವಾದರೆ ನೀವು ಎಡವಟ್ಟು ಮಾಡಿಕೊಂಡು ಹಣ ಕಳೆದುಕೊಳ್ಳೋದು ಸತ್ಯ.
ಈ ಲೇಔಟ್ ಗಳ ನಿರ್ಮಾಣದಲ್ಲಿ ದುರ್ಬಳಕೆಯಾಗ್ತಿರೋ ಖರಾಬು ಜಮೀನಿನ ವಿಚಾರವಾಗಿ ಹಲವು ಪ್ರಕರಣಗಳು ದಾಖಲಾಗಿವೆಯಂತೆ. ಜೊತೆಗೆ ನಿವೇಶನ ಕೊಂಡುಕೊಳ್ಳಲು ಹಣ ಕಟ್ಟಿ ಇತ್ತ ನಿವೇಶನವೂ ಇಲ್ಲದೆ. ಅತ್ತ ಕಟ್ಟಿದ್ದ ಹಣವೂ ಇಲ್ಲದೆ ಎಷ್ಟೋ ಜನ ಬೀದಿಗೆ ಬಿದ್ದಿದ್ದಾರಂತೆ. ಇಂತಹದೊಂದು ಭೂಗಳ್ಳ ಮಾಫಿಯಾಕ್ಕೆ ಕಡಿವಾಣ ಹಾಕಲು ಹಲವರು ದಾಖಲೆಯ ಸಮೇತರಾಗಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಇಂತಹ ಅತಿಕ್ರಮಣ ಪ್ರವೇಶದ ಬಗ್ಗೆ ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು. ಆ ಮೂಲಕ ಜನರನ್ನು ಭೂ ಮಾಫಿಯಾದಾರರ ವಂಚನೆಯಿಂದ ರಕ್ಷಿಸಬೇಕಾಗಿರುವ ಅನಿವಾರ್ಯತೆ ಇದೆ.