ಕೊರಟಗೆರೆ :
ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಕೊರಟಗೆರೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಮೇಶ್ವರ್ ಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಮೂರು ದಿನಗಳ ಕಾಲ ಹೊನಲು ಬೆಳಕಿನ ಪರಮೇಶ್ವರ್ ಕಪ್ ಪಂದ್ಯಾವಳಿ ನಡೆದಿದ್ದು, ರಾಜ್ಯದಿಂದ ಸುಮಾರು 24 ತಂಡಗಳು ಭಾಗಿಯಾಗಿದ್ದವು. ಅದರಲ್ಲಿ ಬೆಂಗಳೂರಿನ ಆರ್.ಕೆ. ಮೈಟಿ ತಂಡ ಪ್ರಥಮ ಸ್ಥಾನ ಪಡೆದಿದ್ದರೆ, ತುಮಕೂರಿನ ಅಶ್ವಮೇಧ ತಂಡ ದ್ವಿತೀಯ ಸ್ಥಾನ ಹಾಗೂ ಉಡುಪಿಯ ಪಾಂಚಜನ್ಯ ಕೋಟಾ ತೃತೀಯ ಸ್ಥಾನ ಹಾಗೂ ಕುಣಿಗಲ್‌ನ ಕಿಬರ್ಲಿ ಟೀಂ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಮ್ಯಾನ್ ಆಪ್ ಸಿರೀಶ್ ಸ್ಯಾಂಡಿಗೆ ಬೈಕ್ ಬಹುಮಾನ ಮತ್ತು ಬೇಸ್ಟ್ ಬೌಲರ್ ಸಂದೀಪ್, ಬೆಸ್ಟ್ ಬ್ಯಾಟ್ಸ್‌ಮನ್ ಸಿದ್ದು ಅವರಿಗೆ ಸಚಿವ ಪರಮೇಶ್ವರ್ ಬಹುಮಾನ ನೀಡಿ ಗೌರವಿಸಿದರು. ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾಂಭಕ್ಕೆ ಆಗಮಿಸಿದ್ದ ಸಚಿವ ಪರಮೇಶ್ವರ್ ಕಪ್ ಗೆದ್ದ ಟೀಂಗಳಿಗೆ ಬಹುಮಾನ ನೀಡಿದರು. ಈ ವೇಳೆ ತಹಶೀಲ್ದಾರ್ ಕೆ.ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಯುವಧ್ಯಕ್ಷ ಬೈರೇಶ್, ಯುವ ಉಪಾಧ್ಯಕ್ಷ ದೀಪು, ಕ್ರಿಕೆಟ್ ಆಯೋಜಕ ನಂದೀಶ್ ಸೇರಿ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಚಿವ ಪರಮೇಶ್ವರ್, ವಸಂತ ನರಸಾಪುರ ಸಮೀಪ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗ್ತಿರೋದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಚಾರ ಆಗಿದೆ. ರಾಜ್ಯದ 2ನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಿ ಮುಂದಿನ ವರ್ಷದೊಳಗೆ ನಾವು ರಣಜಿ ಪಂದ್ಯ ಆಡಲಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಾವು ಓರ್ವ ಕ್ರೀಡಾಪಟುವಾಗಿ ಕ್ರೀಡೆಗೆ ಅತಿಹೆಚ್ಚು ಪ್ರೋತ್ಸಾಹ ನೀಡಿದ್ದೇನೆ. ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದ 3ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣವನ್ನು 40 ದಿನದೊಳಗೆ ಉದ್ಘಾಟನೆ ಆಗಲಿದೆ. ಕೊರಟಗೆರೆ ಕ್ಷೇತ್ರದ ಯುವ ಕ್ರೀಡಾಪಟುಗಳಿಗೆ ನಾನು ನೀಡಿದ ಭರವಸೆ ಈಡೇರಿಸುವ ಕೆಲಸ ಮಾಡಿದ್ದೇನೆ ಎಂದರು. ರಾಜ್ಯಮಟ್ಟದ ಕ್ರಿಕೆಟ್ ಆಟವು ನಮ್ಮ ಕೊರಟಗೆರೆಯಲ್ಲಿ ನಡೆಯುತ್ತಿರೋದು ಹೆಮ್ಮೆಯ ಸಂಗತಿ. ಇದೇ ರೀತಿಯಲ್ಲಿ ಮುಂದಿನ ವರ್ಷ ನಡೆಯುವ ಕ್ರಿಕೆಟ್ ರಾಷ್ಟ್ರ ಮಟ್ಟದಲ್ಲಿ ಆಡುವಂತಹ ಕ್ರೀಡಾಂಗಣ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.
ಮಾದಕ ವಸ್ತು ಮುಕ್ತ ಕರ್ನಾಟಕ ಮಾಡಲು ಗೃಹ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ಮಕ್ಕಳಿಗೆ ಕ್ರೀಡೆಗಳಲ್ಲಿ ಆಸಕ್ತಿ ತೋರಿಸಿದರೇ ಮಾದಕ ವಸ್ತುಗಳೇ ದೂರ ಆಗಲಿದೆ. ಪೋಷಕರು ಸಹ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.