ಚಿಕ್ಕಬಳ್ಳಾಪುರ : ನೀರಿನ ಘಟಕಗಳ ನಿರ್ವಹಣೆಯನ್ನು ಗುತ್ತಿಗೆ ನೀಡುತ್ತಿರೋದಕ್ಕೆ ವಿರೋಧ

ಚಿಕ್ಕಬಳ್ಳಾಪುರ :

ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬೆಲೆ ಪಂಚಾಯ್ತಿ ವ್ಯಾಪ್ತಿಯ ಸಬ್ಬೇನಹಳ್ಳಿ ಗ್ರಾಮದ ಕುಡಿಯುವ ನೀರಿನ ಘಟಕಗಳನ್ನು ಯಾರಿಗೂ ಗುತ್ತಿಗೆ ನೀಡದೇ ಪಂಚಾಯ್ತಿಯೇ ನಿರ್ವಹಣೆ ಮಾಡಬೇಕು ಎಂದು ಗ್ರಾಮಸ್ಥರು , ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಓ ಅಧಿಕಾರಿಗೆ ಮನವಿ ಸಲ್ಲಿಸಿದರು. ಆದರೆ ಈ ವೇಳೆ 6 ರಿಂದ 7 ಜನ ಗುತ್ತಿಗೆದಾರರು ಟೆಂಡರ್‌ ಗೆ ಅರ್ಜಿ ಸಲ್ಲಿಸಿದ್ದು, ಆಧಿಕಾರಿಗಳ ಸಮ್ಮುಖದಲ್ಲೇ ಗೊಂದಲ ಉಂಟಾಯಿತು.

ಸಬ್ಬೇನಹಳ್ಳಿ ಗ್ರಾಮದ ಚುನಾಯಿತ ಸದಸ್ಯರು ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ಗ್ರಾಮ ಪಂಚಾಯ್ತಿ ಆವರಣದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದ್ರು. ಈ ವೇಳೆ ಗ್ರಾಮಸ್ಥರು ಟೆಂಡರ್‌ ಕರೆಯಬಾರದೆಂದು ಗಲಾಟೆ ಮಾಡಿದ್ರು, ಇನ್ನು ಗ್ರಾಮ ಪಂಚಾಯ್ತಿಯೇ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡಬೇಕೆಂದು ಗಲಾಟೆ ನಡೆಸಿದ್ದು. ಕೂಡಲೇ ಪಿಡಿಓ ಎಲ್ಲಾ  ಅರ್ಜಿಗಳನ್ನು ತಿರಸ್ಕರಿಸಿದ್ದು, ಇನ್ಮುಂದೆ ಪಂಚಾಯ್ತಿ ವತಿಯಿಂದಲೇ ಕುಡಿಯುವ ನೀರಿನ ಘಟಕ ಮುಂದುವರಿಸಲು ತೀರ್ಮಾನಿಸಿದರು.

ಇನ್ನು ಪಿಡಿಓ ರಾಮಕೃಷ್ಣ ಮಾತನಾಡಿ, ಗ್ರಾಮಸ್ಥರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದು, ಜನರ ತೀರ್ಮಾನಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳುವುದಿಲ್ಲ. ಗ್ರಾಮಸ್ಥರೆಲ್ಲರ ಮನವಿಯಂತೆ ಗ್ರಾಮ ಪಂಚಾಯಿತಿಯಿಂದಲೇ ಕುಡಿಯುವ ನೀರಿನ ಘಟಕದ ಜವಾಬ್ದಾರಿಯನ್ನು ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮಸ್ಥ ನಾಗೇಂದ್ರ ಬಾಬು ಮಾತನಾಡಿ, ಒಂದು ವರ್ಷದ ಹಿಂದೆ ಬೆಳಗಾವಿ ಮೂಲದವರು ಕಾಂಟ್ರಾಕ್ಟ್‌ ತಗೊಂಡು 5 ತಿಂಗಳು ಕೂಡ ನಿರ್ವಹಣೆ ಮಾಡೋಕಾಗಿಲ್ಲ. ಆದ್ದರಿಂದ ಸರಿಯಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಯಾರಿಗೂ ಗುತ್ತಿಗೆ ನೀಡದೇ ಪಂಚಾಯತಿ ವತಿಯಿಂದಲೇ ನಿರ್ವಹಣೆ ಮಾಡಿದರೆ ಉತ್ತಮ. ಅನಾವಶ್ಯಕವಾಗಿ ಗುತ್ತಿಗೆ ನೀಡಿದರೆ ರಾಜಕೀಯ ವೈಷಮ್ಯಗಳು ಬೆಳೆಯುತ್ತೆ. ಅಲ್ಲದೇ ಊರಿನಲ್ಲಿ ನಾವೆಲ್ಲರೂ ಒಗ್ಗಟಾಗಿ ಇದ್ದೇವೆ, ಗುತ್ತಿಗೆ ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಇದಕ್ಕೆ ಗ್ರಾಮಸ್ಥರೆಲ್ಲರೂ ಸಮ್ಮತಿಸಿದ್ದಾರೆ ಎಂದರು.

ಒಟ್ಟಿನಲ್ಲಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನ ಗುತ್ತಿಗೆ ನೀಡುತ್ತಿರೋದಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದ್ದಂತೆ ಗ್ರಾಮ ಪಂಚಾಯ್ತಿ ಈ ನಿರ್ಧಾರದಿಂದ ಹಿಂದೆಸರಿದಿದ್ದು, ಗೊಂದಲಗಳಿಗೆ ತೆರೆ ಎಳೆದಿದೆ.

Author:

share
No Reviews