ಪಾವಗಡ ಪೊಲೀಸ್ ಠಾಣೆತುಮಕೂರು
ಪಾವಗಡ:
ಪಾವಗಡದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರ ನಿದ್ದೆಗೆಡಿಸುವಂತಾಗಿದೆ. ಪಾವಗಡ ಪಟ್ಟಣದ ಮತ್ತೆರಡು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿಸಿದ್ದು ಒಂದು ಮನೆಯಲ್ಲಿ ಸಿಕ್ಕ ವಸ್ತುಗಳನ್ನು ದೋಚಿದರೆ, ಮತ್ತೊಂದು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಕಳ್ಳರು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಪಟ್ಟಣದ ಜ್ಞಾನ ಬೋಧನಿ ಶಾಲೆ ಪಕ್ಕದಲ್ಲಿಯ ಮುಖ್ಯ ರಸ್ತೆಯ ಎರಡು ಮನೆಯಲ್ಲಿ ಕಳ್ಳರು ಕನ್ನ ಹಾಕಲು ಯತ್ನಿಸಿದ್ದಾರೆ. ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಘುವೀರ್ ಎಂಬುವರ ಮನೆಯಲ್ಲಿ ಹುಂಡಿಯಲ್ಲಿದ್ದ ಹಣ, ಎರಡು ರೇಷ್ಮೆ ಸೀರೆಗಳು ಹಾಗೂ ದೇವರ ಕೋಣೆಯಲ್ಲಿದ್ದ ಎರಡು ಬೆಳ್ಳಿ ದ್ವೀಪಗಳನ್ನು ಕಳ್ಳರು ದೋಚಿದ್ದಾರೆ. ಇನ್ನು ರಘುವೀರ್ ಮನೆಯ ಪಕ್ಕದ ಮನೆಯಲ್ಲಿದ್ದ ನಿವೃತ್ತ ಶಿಕ್ಷಕಿ ಮನೆಯ ಬಾಗಿಲನ್ನು ಹೊಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಶಿಕ್ಷಕಿ ಮನೆಯಲ್ಲಿ ಹಣವಾಗಲಿ, ಬೆಲೆ ಬಾಳುವ ವಸ್ತುವಾಗಲಿ ಯಾವುದೂ ಸಿಕ್ಕಿಲ್ಲ.
ಇನ್ನು ಕಳ್ಳತನವಾದ ಮನೆಗಳ ಪಕ್ಕದ ಮನೆಯಲ್ಲಿಯೇ ಸಿಪಿಐ ಸುರೇಶ್ ಮನೆ ಇದೆ. ಪೊಲೀಸ್ ಮನೆಯ ಪಕ್ಕದ ಮನೆಗಳಲ್ಲೇ ಕಳ್ಳತನವಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಜೊತೆಗೆ ಪಾವಗಡದಲ್ಲಿ ಸರಣಿ ಕಳ್ಳತನವಾಗುತ್ತಿದ್ದು, ಜನರಿಗೆ ರಕ್ಷಣೆಯೇ ಇಲ್ವಾ ಎಂಬ ಅನುಮಾನ ಮೂಡಿದೆ.