ನೆಲಮಂಗಲ :
ಶಾರ್ಟ್ ಸರ್ಕ್ಯೂಟ್ನಿಂದ ಆಯಿಲ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗ ಹೊತ್ತಿ ಉರಿದು ಕೋಟ್ಯಾಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ಸುಟ್ಟು ಭಸ್ಮವಾಗಿರುವ ಘಟನೆ ನೆಲಮಂಗಲ ಸಮೀಪದ ಅಡಕಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಪ್ಪ ಎಂಬುವರಿಗೆ ಸೇರಿದ 33 ಸಾವಿರ ಚದರ ಅಡಿ ವಿಸ್ತೀರ್ಣವುಳ್ಳ ಬೃಹತ್ ಗೋದಾಮು ಬೆಂಕಿಗೆ ಆಹುತಿಯಾಗಿದೆ. ನೆಲಮಂಗಲ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶೆಲ್ ಕಂಪನಿಗೆ ಸೇರಿದ ಆಯಿಲ್ ಉತ್ಪನ್ನಗಳನ್ನು ಗೋದಾಮಿನಲ್ಲಿ ಇರಿಸಲಾಗಿತ್ತು. ನೆಲಮಂಗಲ, ಪೀಣ್ಯ, ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 60 ರಿಂದ 70 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿ ಸಮಯದಲ್ಲಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಬೆಂಕಿ ಇಡೀ ಗೋದಾಮಿಗೆ ವ್ಯಾಪಿಸಿದೆ ಎನ್ನಲಾಗಿದೆ. ಬೆಂಕಿ ಅವಘಡದ ದೃಶ್ಯಗಳು 10 ಕಿ.ಮೀ ದೂರದಿಂದಲೂ ಕಾಣಿಸುತ್ತಿದ್ದು, ದಟ್ಟವಾದ ಹೊಗೆ ಆಕಾಶವನ್ನು ಆವರಿಸಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.