ಮೈಸೂರು:
ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಮಕ್ಕಳಿಗಾಗಿ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಬಾಬುರಾಯನಕೊಪ್ಪಲು ಗ್ರಾಮದ ಗೃಹಿಣಿ ವಿಜಯಲಕ್ಷ್ಮಿ ಎಂಬುವವರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಮಗೆ ಬಂದಿದ್ದ 30 ಸಾವಿರ ಗೃಹಲಕ್ಷ್ಮಿ ಹಣದ ಜೊತೆಗೆ ಅವರು ಕೂಡಿಟ್ಟಿದ್ದ 20 ಸಾವಿರ ರೂ ಸೇರಿಸಿ ಒಟ್ಟು ಐವತ್ತು ಸಾವಿರ ರೂಪಾಯಿಯಲ್ಲಿ ಕುಡಿಯುವ ನೀರಿನ ವಾಟರ್ ಫಿಲ್ಟರ್ ಅನ್ನು ಹಾಕಿಸಿದ್ದಾರೆ.
ವಿಜಯಲಕ್ಷ್ಮಿ ಅವರ ಈ ಕಳಕಳಿಗೆ ಶಾಲೆಯ ಶಿಕ್ಷಕರು ಸೇರಿದಂತೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ. ಹಾಗೂ ವಿಜಯಲಕ್ಷ್ಮಿ ಅವರ ಈ ಸಾಮಾಜಿಕ ಕಾರ್ಯಕ್ಕೆ ಅವರ ಪತಿ ಸಹ ಪ್ರೋತ್ಸಾಹ ನೀಡಿದ್ದಾರೆ. ರಾಜ್ಯ ಸರ್ಕಾರದ ಪಂಚ ಯೋಜನೆಗಳು ಅನೇಕರಿಗೆ ಆಸರೆಯಾಗಿದೆ. ಮಹಿಳೆಯರು ಈ ಯೋಜನೆಯ ಹಣವನ್ನು ಕುಟುಂಬದ ನಿರ್ವಹಣೆಯೊಂದಿಗೆ ಸಾಮಾಜದ ಕಾರ್ಯಕ್ಕೂ ಬಳಸುತ್ತಿರುವುದು ಉತ್ತಮ ಕಾರ್ಯವಾಗಿದೆ.