ಹೈದರಾಬಾದ್ : ಬಹು ನಿರೀಕ್ಷಿತ 72ನೇ ಆವೃತ್ತಿಯ ಮಿಸ್ ವರ್ಲ್ಡ್ 2025 ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಿನ್ನೆ ಹೈದರಾಬಾದಿನ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ದೂರಿಯಾಗಿ ಜರುಗಿದ್ದು, ಥೈಲ್ಯಾಂಡ್ನ ಒಪಲ್ ಸುಚಾತಾ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ಮೊದಲ ರನ್ನರಪ್ ಆದರೆ, ಪೋಲೆಂಡಿನ ಪೊಲ್ಯಾಂಡ್‌ನ ಸುಂದರಿ 2ನೇ ರನ್ನರ್ ಅಪ್ ಹಾಗೂ ಕೆರೆಬಿಯನ್ ದ್ವೀಪದ ಸುಂದರಿ 3ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಹಾಲಿ ಮಿಸ್ ವರ್ಲ್ಡ್ ಹಾಗೂ ಚೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಜ್ಕೋವಾ ಅವರು ನೂತನ ವಿಶ್ವ ಸುಂದರಿ ಓಪಲ್ ಸುಚಾತಾಗೆ ವಜ್ರದ ಕಿರೀಟವನ್ನು ಅರ್ಪಿಸಿದರು. ವಿಶ್ವ ಸುಂದರಿ ಓಪಲ್ ಸುಚಾತಾ ಅವರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂ. ಬೆಲೆ ಬಾಳುವ ವಜ್ರದ ಕಿರೀಟ ಅವರ ಮುಡಿಗೆ ಸಿಂಗರಿಸಲಾಯಿತು.
ಇನ್ನು ಭಾರತದಿಂದ ಸ್ಪರ್ಧೆಗೆ ಆಯ್ಕೆಯಾದ ನಂದಿನಿ ಗುಪ್ತಾ ಅಂತಿಮ ಎಂಟು ಮಂದಿ ಆಯ್ಕೆಯ ಪಟ್ಟಿಗೆ ಸೇರುವ ಮುನ್ನವೇ ಹೊರಬಿದ್ದರು. ಥೈಲ್ಯಾಂಡಿನ ಫುಕೆಟ್‌ನಲ್ಲಿ ಜನಿಸಿದ ಓಪಲ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿ ಪೂರೈಸಿದ್ದು, ಬಳಿಕ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕಾಕ್ಗೆ ತೆರಳಿದವರು. ಅಲ್ಲಿ ಫ್ಯಾಷನ್ ಲೋಕದಲ್ಲಿ ಪ್ರವೇಶಿಸಿ, ಹತ್ತಿರದ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.