ತುಮಕೂರು:
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲೊಂದು ಅಮಾನವೀಯ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಕಾನೂನು ಚೌಕಟ್ಟನ್ನ ಮೀರಿ ಶಾಲೆಯ ಆವರಣದಲ್ಲೇ ವಿದ್ಯಾರ್ಥಿ ಮೇಲೆ ಗ್ಯಾಂಗ್ವೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರೋ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಶಾಲೆಯ ಆವರಣದಲ್ಲಿ 10ನೇ ತರಗತಿ ವಿದ್ಯಾರ್ಥಿಯನ್ನು ಗ್ಯಾಂಗ್ವೊಂದು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಹುಳಿಯಾರಿನ KPS ಶಾಲೆಯಲ್ಲಿ ತರಗತಿ ಮಧ್ಯಾಹ್ನದ ವೇಳೆ ಪುಂಡರ ಗ್ಯಾಂಗ್ ಬಾಲಕಿಯರ ಶೌಚಾಲಯದ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು. ಇದನ್ನು ವಿದ್ಯಾರ್ಥಿ ಯಶ್ವಂತ್ ಪ್ರಶ್ನಿಸಿದ್ದಾನೆ. ಇದಕ್ಕೆ ಕೆರಳಿದ ಮಹಬೂಬ್ ಷರಿಫ್ ಅಂಡ್ ಗ್ಯಾಂಗ್ ಯಶ್ವಂತ್ನನ್ನು ಶಾಲೆಯ ಆವರಣದಲ್ಲೇ ಅಟ್ಟಾಡಿಸಿ ದೊಣ್ಣೆಯಿಂದ ಯಶ್ವಂತ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆಯಿಂದ ಯಶ್ವಂತ್ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಪುಂಡರ ಪುಂಡಾಟಿಕೆ ಸಂಬಂಧ ಶಾಲೆಯ ಆಡಳಿತ ಮಂಡಳಿ ಹಲ್ಲೆ ನಡೆಸಿದ ಗ್ಯಾಂಗ್ ವಿರುದ್ಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಹುಳಿಯರು ನಿವಾಸಿ ಮಹಬೂಬ್ ಷರಿಫ್ ಸೇರಿ ಐವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗ್ತಿದ್ದು, ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಗೃಹ ಸಚಿವರ ತವರು ಕ್ಷೇತ್ರದಲ್ಲೇ ಪುಂಡರ ಗ್ಯಾಂಗ್ ಅಟ್ಟಹಾಸ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ ಎಂಬ ಅನುಮಾನ ಶುರುವಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.