ತುಮಕೂರು :
ನಗರದಲ್ಲಿ ರೈಲ್ವೆ ಗೇಟ್ಗಳಿಂದ ನಿತ್ಯ ಸವಾರರಿಗೆ ಸಂಕಷ್ಟ ತಂದೊಡ್ಡಿತ್ತು. ರೈಲ್ವೆ ಗೇಟ್ಗಳನ್ನು ಹಾಕುವುದರಿಂದ ಸಂಚಾರ ದಟ್ಟಣೆ, ಸಮಯ ವ್ಯರ್ಥದಿಂದ ಜನರು ಹೈರಾಣಾಗಿದ್ದರು. ಹೌದು ನಗರದ ಬಟವಾಡಿ, ಬಡ್ಡಿಹಳ್ಳಿ, ಮೈದಾಳ ಬಳಿ ಇದ್ದ ರೈಲ್ವೆ ಗೇಟ್ಗಳಿಂದ ಜನರಿಗೆ ಸಮಸ್ಯೆ ಉಂಟಾಗ್ತಿದ್ದು, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣದ ಅವಶ್ಯಕತೆ ಇದ್ದು, ಜನರು ಹಲವು ಬಾರಿ ಬೇಡಿಕೆಯನ್ನು ಸಲ್ಲಿಸಿದ್ದರು. ಆದರೆ ಈವರೆಗೂ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಕಾರ್ಯ ಮಾತ್ರ ಆಗಿರಲಿಲ್ಲ. ಈಗ ತುಮಕೂರಿನ ಸಂಸದರಾದ ಸೋಮಣ್ಣ ರೈಲ್ವೆ ಸಚಿವರಾದ ಬಳಿಕ ರೈಲ್ವೆ ಕಾಮಗಾರಿಗಳಿಗೆ ವೇಗ ಸಿಕ್ಕಿದ್ದು, ನಗರದ ರೈಲ್ವೆ ಗೇಟ್ಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ನಿನ್ನೆ ನಗರದ ಬಟವಾಡಿ, ಬಡ್ಡಿಹಳ್ಳಿ ಹಾಗೂ ಮೈದಾಳ ಬಳಿ ರೈಲ್ವೆ ಮೇಲ್ಸೇತುವೆಗೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 43 ಕೋಟಿ ರೂಪಾಯಿ ವೆಚ್ಚದಲ್ಲಿ ಬಟವಾಡಿ ರೈಲ್ವೆ ಮೇಲ್ಸೇತುವೆ, 26 ಕೋಟಿ ರೂಪಾಯಿ ವೆಚ್ಚದಲ್ಲಿ ಬಡ್ಡಿಹಳ್ಳಿ ಬಳಿ ಹಾಗೂ 57 ಕೋಟಿ ವೆಚ್ಚದಲ್ಲಿ ಮೈದಾಳ ಬಳಿ ರೈಲ್ವೆ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ. ಇನ್ನು ಬಡ್ಡಿಹಳ್ಳಿ ಬಳಿ ರೈಲ್ವೆ ಪಾದಾಚಾರಿ ಸುರಂಗ ಮಾರ್ಗಕ್ಕಾಗಿ 26 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ಟ್ರಾಫಿಕ್ ಕಿರಿಕಿರಿಯಿಂದಾಗಿ ತುಮಕೂರಿನ ನಾಗರೀಕರು ಬೇಸತ್ತು ಬೇಡಿಕೆ ಸಲ್ಲಿಸಿದ್ದರು, ಬೇಡಿಕೆಯನ್ನು ಸಚಿವರಾದ ಸೋಮಣ್ಣ ಗಂಭೀರವಾಗಿ ಪರಿಗಣಿಸಿದ್ದು, ನಾಗರೀಕರ ಬೇಡಿಕೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುದ್ದಲಿ ಪೂಜೆ ವೇಳೆ ಶಾಸಕ ಜ್ಯೋತಿ ಗಣೇಶ್ ಸೇರಿ ರೈಲ್ವೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ವಿವಿಧೆಡೆ ಸುಮಾರು 650 ಕೋಟಿ ವೆಚ್ಚದಲ್ಲಿ 22 ಕೆಳಸೇತುವೆ, ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ಧೇಶಿಸಲಾಗಿದೆ. ಸದ್ಯ ಈಗ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಈವರೆಗೂ 10 ಕಾಮಗಾರಿಗಳಿಗೆ ಚಾಲನೆ ನೀಡಿದಂತಾಗಿದೆ. ಉಳಿದೆಡೆಗಳಲ್ಲಿ ಹಂತ ಹಂತವಾಗಿ ಕೆಲಸ ಆರಂಭಿಸಲಾಗುವುದು ಎಂದರು. ಇದರಿಂದ ಸಾರ್ವಜನಿಕರು ಸಂಚಾರ ದಟ್ಟಣೆಯಿಂದ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.
ಈ ವೇಳೆ ನಗರದ ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕೆಲವೇ ದಿನಗಳಲ್ಲಿ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇನ್ನು, ಶಿರಾ ಶಾಸಕ ಟಿ.ಬಿ ಜಯಚಂದ್ರ ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಸಲ್ಲಿಸಿದ್ದು, ಜಯಚಂದ್ರ ಅವರ ಬೇಡಿಕೆಗೆ ಸೋಮಣ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಏರ್ಪೋರ್ಟ್ ನಿರ್ಮಾಣ ಕೆಲಸ ಮಾಡುತ್ತೇವೆ. ಈ ಬೇಡಿಕೆಗೆ ಸುಮಾರು 33 ಶಾಸಕರು ಹಾಗೂ ಬಿಜೆಪಿಯ ಕೆಲ ನಾಯಕರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಸಾಧಕ – ಭಾದಕ ಚರ್ಚಿಸಿ ಬಹುಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೋಮಣ್ಣ ತಿಳಿಸಿದರು.
ಒಟ್ಟಿನಲ್ಲಿ, ತುಮಕೂರಿನಲ್ಲಿ ಬಹು ದಿನಗಳಿಂದ ರೈಲ್ವೇ ಗೇಟ್ಗಳಿಂದ ಉಂಟಾಗ್ತಿದ್ದ ಸಮಸ್ಯೆಯಿಂದ ಸವಾರರಿಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ. ಇದರಿಂದ ನಗದ ಜನರಂಥೂ ನಿಟ್ಟುಸಿರು ಬಿಟ್ಟಿದ್ದಾರೆ.