ಬೀದರ್:
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರ್ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಗುರಯ್ಯ ಬಂಡಯ್ಯ ಸ್ವಾಮಿ (38) ಮೃತ ವ್ಯಕ್ತಿಯಾಗಿದ್ದಾನೆ. ಮೃತ ವ್ಯಕ್ತಿಯ ಸೋದರ ಸಂಬಂಧಿ ಕಲ್ಲಯ್ಯ ಸ್ವಾಮಿ ಹಾಗೂ ಅವರ ಅಪ್ರಾಪ್ತ ವಯಸ್ಸಿನ ಮಗ ಕೊಲೆ ಆರೋಪಿಗಳಾಗಿದ್ದಾರೆ. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೊಳ್ಳೂರು ಗ್ರಾಮದಲ್ಲಿ ಇವರ ನಡುವೆ ಜಗಳ ನಡೆದಿದ್ದು. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಈ ಆರೋಪಿಗಳು ಗುರಯ್ಯ ಸ್ವಾಮಿಯವರನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಔರಾದ್ ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರಯ್ಯ ಸ್ವಾಮಿ ಮೃತಪಟ್ಟಿದ್ದಾರೆ.
ಘಟನೆ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.