ಮಹಾಕುಂಭಮೇಳ 2025:
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತರ ದಂಡು ಸಾಗರದಂತೆ ಹರಿದುಬರುತ್ತಿದೆ. ನೆನ್ನೆ ಮಾಘ ಪೌರ್ಣಮಿ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪವಿತ್ರ ಸ್ನಾನದಲ್ಲಿ ತೊಡಗಿದ್ದರು. ಮಹಾಕುಂಭ 2025ರ ಪವಿತ್ರ ಸ್ನಾನದ ದಿನಗಳಲ್ಲಿ ಒಂದಾದ ಮಾಘ ಪೂರ್ಣಿಮೆಯಾದ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 10 ಮಿಲಿಯನ್ ಯಾತ್ರಿಕರು ಈಗಾಗಲೇ ಪವಿತ್ರ ಸ್ನಾನ ಮಾಡಿದ್ದಾರೆ.
ಮಾಘ ಪೂರ್ಣಿಮೆಯ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತರನ್ನು ಹೂವಿನ ದಳಗಳ ಪುಷ್ಪ ವರ್ಷದ ಮೂಲಕ ಸ್ವಾಗತಿಸಲಾಯಿತು. ಇಲ್ಲಿಯವರೆಗೆ ಸುಮಾರು 48.83 ಮಿಲಿಯನ್ ಭಕ್ತರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಮಹಾಕುಂಭ ಮೇಳವು ಫೆಬ್ರವರಿ 26ರ ಮಹಾ ಶಿವರಾತ್ರಿ ಯಂದು ಅಂತಿಮ ಅಮೃತ ಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದೆ.
ಶಿವರಾತ್ರಿಯಂದು ಐತಿಹಾಸಿಕ ಮಹಾಕುಂಭ ಮೇಳ ಮುಕ್ತಾಯಗೊಳ್ಳಲಿದೆ. ಅಂದು ಕೋಟ್ಯಂತರ ಭಕ್ತಾದಿಗಳು ಪ್ರಯಾಗ್ರಾಜ್ಗೆ ಬರಲಿದ್ದು, ಲಕ್ಷಾಂತರ ಭಕ್ತರು ಸಂಗಮದಲ್ಲಿ ಕೊನೆಯ ಪವಿತ್ರ ಸ್ನಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂತರು, ಅಖಾಡಗಳು ಮತ್ತು ಆಧ್ಯಾತ್ಮಿಕ ನಾಯಕರು ಅಂದು ಶಿವನ ಕುರಿತಾದ ಪ್ರಾರ್ಥನೆಗಳು, ರುದ್ರಾಭಿಷೇಕ ಪೂಜೆಗಳು ಮತ್ತು ವಿಶೇಷ ಮೆರವಣಿಗೆಗಳನ್ನು ನಡೆಸಲಿದ್ದಾರೆ. ಹಲವು ಮಂಗಳಕರವಾದ ದಿನಗಳಂದು ಪವಿತ್ರ ಸ್ನಾನಕ್ಕಾಗಿ ಭಕ್ತರು ಹರಿದು ಬರುತ್ತಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಇಲ್ಲಿ ಸ್ನಾನಘಟ್ಟಗಳು ಹಾಗೂ ಪ್ರಯಾಗ್ರಾಜ್ನಲ್ಲಿ ಎಲ್ಲ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಗ್ರಾಜ್ನ ಸ್ನಾನಘಟ್ಟಗಳಲ್ಲಿ ಜನಸಂದಣಿ ತಡೆಗಟ್ಟಲು ಮಹಾಕುಂಭ ಮೇಳ ಪರಿಷತ್ತು ಸುಮಾರು 40 ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ. ಇವರು ಸುಗಮ ಜನಸಂದಣಿ ನಿರ್ವಹಣೆಗಾಗಿ ಪ್ರತಿ ನದಿಯ ದಡದಲ್ಲಿ ಅನೌನ್ಸ್ಮೆಂಟ್ಗಳ ಮೂಲಕ ಭಕ್ತರನ್ನು ನಿಯಂತ್ರಣ ಮಾಡುತ್ತಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ, ಉದ್ಯಮಿ ಮುಕೇಶ್ ಅಂಬಾನಿ ಸಹ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಭೇಟಿ ನೀಡಿ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದಾರೆ.