ಮಧುಗಿರಿ : ಪತ್ನಿಯನ್ನೇ ಕೊಂದಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ

ಮಧುಗಿರಿ :

ಇತ್ತೀಚಿನ ದಿನಗಳಲ್ಲಿ ಪತ್ನಿಯನ್ನೇ ಪಾಪಿ ಗಂಡಂದಿರು ಕೊಲ್ಲುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊಲೆಗಡುಕರಾಗುವ ಗಂಡಂದಿರಿಗೆ ನ್ಯಾಯಾಲಯ ಎಚ್ಚರಿಕೆ ಗಂಟೆಯನ್ನು ನೀಡಿದೆ. ಕ್ಷುಲ್ಲಕ ಕಾರಣಕ್ಕೆ ಅಥವಾ ಪತ್ನಿಯ ಶೀಲ ಶಂಕಿಸಿ ಪಾಪಿ ಗಂಡಂದಿರು, ಪತ್ನಿಯ ತ್ಯಾಗವನ್ನು ಲೆಕ್ಕಿಸದೇ ಕೊಲೆಪಾತಕರಾಗ್ತಿದ್ದಾರೆ. ಪತ್ನಿಯನ್ನೇ ಕೊಂದಿದ್ದ ಪಾಪಿ ಪತಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಸಮಾಜಕ್ಕೆ ಒಂದು ಸಂದೇಶ ರವಾನಿಸಿದಂತಾಗಿದೆ.

ಮಧುಗಿರಿ 4ನೇ ಅಧಿಕ ಸತ್ರ ನ್ಯಾಯಾಲಯ 2021ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ತೀರ್ಪು ನೀಡಿದ್ದು, ಕೊಲೆ ಮಾಡಿದ್ದ ಗಂಡನಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ದಂಡ  ವಿಧಿಸಿ ತೀರ್ಪು ಪ್ರಕಟಿಸಿದೆ. ಕೊರಟಗೆರೆ ತಾಲೂಕಿನ ಥರಟಿ ಗ್ರಾಮದ ದೇವರಾಜು ಎಂಬುವವನು ಮಾರ್ಚ್‌ 10, 2021ರಲ್ಲಿ, ಪತ್ನಿ ಯಶೋಧಾಳ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಪತ್ನಿ ಯಶೋಧಾ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗ್ತಾ ಇದ್ದು, ಸುಖ ಸಂಸಾರ ಮಾಡ್ತಾ ಇದ್ರು. ಆದರೆ ಪಾಪಿ ಗಂಡನಿಗೆ ತಲೆಗೆ ಅದೇನು ಹೊಕ್ಕಿತ್ತೋ ಗೊತ್ತಿಲ್ಲ, ಪತ್ನಿ ಮೇಲೆ ಸದಾ ಅನುಮಾನ ಪಡ್ತಾ ಇದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಮಾತು ತಾರಕ್ಕೇರಿ ಗಂಡ ಮಚ್ಚಿನಿಂದ ಹೆಂಡ್ತಿಯನ್ನು ಕೊಚ್ಚಿ ಕೊಲೆ ಮಾಡಿದ್ದ.

ಇನ್ನು ಕೊಲೆ ಸಂಬಂಧ ಅಂದಿನ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ತನಿಖೆ ನಡೆಸಿ‌ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮಧುಗಿರಿ 4 ನೇ ಅಧಿಕ‌ ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾದ ಬಿ. ಎಂ ನಿರಂಜನಮೂರ್ತಿ ವಾದ ಮಂಡಿಸಿದ್ದರು. ಸುಧೀರ್ಘ ವಾದ ಆಲಿಸಿದ ನ್ಯಾಯಾಲಯ ಕೊಲೆ ಅಪರಾಧಿ ದೇವರಾಜುಗೆ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ತೀರ್ಪಿನಿಂದ ಕೋಪದ ಕೈಗೆ ಬುದ್ದಿ ಕೊಟ್ಟು ಕೊಲೆ ಹಂತಕ್ಕೆ ಹೊಗುವ ಗಂಡಸರಿಗೆ ತಕ್ಕ ಪಾಠ ಕಲಿಸಿದಂತಾಗಿದೆ.

Author:

share
No Reviews