ಮಧುಗಿರಿ:
ಮಧುಗಿರಿ ಪಟ್ಟಣ ಏಕಾಶಿಲಾ ಬೆಟ್ಟಕ್ಕೆ ಫುಲ್ ಫೇಮಸ್ ಆದರೆ ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರೇ ಸಿಗ್ತಾ ಇಲ್ಲವಂತೆ. ನೀರು ಇದ್ದರೂ ಕೂಡ ಇಲ್ಲಿ ಕುಡಿಯುವ ನೀರಿಗೆ ಪೀಕಾಲಾಟ ಶುರುವಾಗಿದೆ, ಇದಕ್ಕೆಲ್ಲಾ ಮುಖ್ಯ ಕಾರಣ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎಂದು ಸ್ಥಳೀಯರು ಆರೋಪ ಮಾಡ್ತಾ ಇದ್ದಾರೆ.
ಮಧುಗಿರಿ ಪಟ್ಟಣದ 7ನೇ ವಾರ್ಡ್ನಲ್ಲಿ 2017-18ರಲ್ಲಿ ಮುಖ್ಯ ಮಂತ್ರಿಗಳ ಅಲ್ಪ ಸಂಖ್ಯಾತರ ಅಭಿವೃದ್ದಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಸುಮಾರು ತಿಂಗಳೇ ಕಳೆದಿದ್ದರೂ ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸ ಮಾತ್ರ ಮಾಡ್ತಾ ಇಲ್ಲ. ಇದರಿಂದ ಪುರಸಭೆ ವ್ಯಾಪ್ತಿಯ ಬೋರ್ವೆಲ್ಗಳಲ್ಲಿ ಸಮರ್ಪಕ ನೀರು ಇದ್ದರೂ ಕೂಡ ಶುದ್ಧ ಕುಡಿಯುವ ನೀರು ಮಾತ್ರ ಸಿಗ್ತಾ ಇಲ್ಲ. ಇನ್ನು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸುವ ಗೋಜಿಗೆ ಮಾತ್ರ ಹೋಗ್ತಾ ಇಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಅಶುದ್ಧ ನೀರನ್ನೇ ಕುಡಿಯುತ್ತಿದ್ದ ಆನಾರೋಗ್ಯಕ್ಕೆ ತುತ್ತಾಗೋ ಭೀತಿಯಲ್ಲಿದ್ದಾರೆ.
ಶುದ್ಧ ನೀರು ಆರೋಗ್ಯಕ್ಕೆ ತುಂಬಾ ಅವಶ್ಯಕ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ, ಜನರ ಆರೋಗ್ಯವನ್ನು ಕಾಪಾಡಬೇಕಿದೆ.