ಮಧುಗಿರಿ :
ಬರದ ನಾಡು ಎಂದೇ ಕುಖ್ಯಾತಿ ಪಡೆದಿರೋ ಮಧುಗಿರಿಯ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಸ್ವಚ್ಛತೆ ಕಾಪಾಡುವಂತೆ ಈಗಾಗಲೇ ಸರ್ಕಾರ ಹಾಗೂ ಪಂಚಾಯತ್ ಇಲಾಖೆ ಪದೇ ಪದೇ ಸೂಚನೆಗಳನ್ನು ನೀಡುತ್ತಿದ್ದರೂ ಕೂಡ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ. ಮಧುಗಿರಿ ತಾಲೂಕಿನ ಕೊಡುಗೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಶುದ್ಧ ನೀರಿನ ಘಟಕದ ಪಕ್ಕದಲ್ಲಿಯೇ ರಾಜಕಾಲುವೆ ಇದ್ದು, ಚರಂಡಿ ನೀರು ತುಂಬಿಕೊಂಡಿದ್ದು ಹುಳಗಳು ತೇಲುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ.
ಇನ್ನು ಗ್ರಾಮ ಪಂಚಾಯ್ತಿ ಸಮೀಪದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ರಾಜಕಾಲುವೆಯಿಂದಾಗಿ ದುರ್ನಾತದ ಜೊತೆಗೆ ಸೊಳ್ಳೆಗಳ ಉತ್ಪತ್ತಿಗೆ ದಾರಿಯಾಗಿದ್ದು, ಆಸ್ಪತ್ರೆಗೆ ರೋಗ ವಾಸಿಗೆಂದು ಬರುವ ರೋಗಿಗಳು ರೋಗ ಹತ್ತಿಸಿಕೊಂಡೇ ಹೋಗುವ ದುಸ್ಥಿತಿ ಇದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ನರೇಗಾ ಕಾಮಗಾರಿ ನೆಪದಲ್ಲಿ ಚರಂಡಿ ನೀರನ್ನು ತಡೆದ ಪರಿಣಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಚರಂಡಿ ತುಂಬಿ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಪಾಲಪ್ಪ ಎಂಬುವವರು ಗ್ರಾಮ ಪಂಚಾಯಿತಿಗೆ ಲಿಖಿತವಾಗಿ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕ್ತಿದ್ದಾರೆ.