ಮಧುಗಿರಿ: ವೈದ್ಯರ ಎಡವಟ್ಟು, ಕಾಲು ಸ್ವಾಧೀನವನ್ನೇ ಕಳೆದುಕೊಂಡ ಬಾಲಕ..!

ರಾಘವೇಂದ್ರ ಆಸ್ಪತ್ರೆ, ಮಧುಗಿರಿ
ರಾಘವೇಂದ್ರ ಆಸ್ಪತ್ರೆ, ಮಧುಗಿರಿ
ತುಮಕೂರು

ಮಧುಗಿರಿ:

ವೈದ್ಯೋ ನಾರಾಯಣೋ ಹರಿ ಅನ್ನೋ ಮಾತೇ ಇದೆ. ವೈದ್ಯರನ್ನು ದೇವರಂತೆ ನೋಡೋ ಸಂಸ್ಕೃತಿ ನಮ್ಮದು. ಆದರೆ ಜೀವ ಉಳಿಸಬೇಕಾದ ವೈದ್ಯರೇ ಎಡವಟ್ಟು ಮಾಡಿಬಿಟ್ಟರೆ ಏನಾಗುತ್ತೆ ಹೇಳಿ. ಅಂಥದ್ದೇ ಒಂದು ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ವೈದ್ಯರ ಎಡವಟ್ಟಿನಿಂದ ೯ ವರ್ಷದ ಬಾಲಕನೋರ್ವ ತನ್ನ ಕಾಲಿನ ಸ್ವಾಧೀನವನ್ನೇ ಕಳೆದುಕೊಂಡಿದ್ದಾನೆ.

ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿರುವ ರಾಘವೇಂದ್ರ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಬಾಲಕನೊಬ್ಬ ತನ್ನ ಎಡಗಾಲಿನ ಸ್ವಾಧೀನವನ್ನೇ ಕಳೆದುಕೊಂಡುಬಿಟ್ಟಿದ್ದಾನೆ. ಮಗುವಿನ ಸೊಂಟಕ್ಕೆ ನಿಡಬೇಕಿದ್ದ ಚುಚ್ಚುಮದ್ದನ್ನು ನರಕ್ಕೆ ನೀಡಿ ಎಡವಟ್ಟು ಮಾಡಿದ ಪರಿಣಾಮ 9 ವರ್ಷದ ಬಾಲಕ ಗಿರೀಶ್‌ ತನ್ನ ಎಡಗಾಲಿನ ಸ್ವಾಧಿನ ಕಳೆದುಕೊಂಡಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಕೃಷ್ಣಯ್ಯನಪಾಳ್ಯದ ಗಂಗರಾಜು ಎಂಬುವವರು ಫೆ.೬ ರಂದು ಮಧ್ಯಾಹ್ನ ತನ್ನ ಮಗ ಗಿರೀಶ್‌ಗೆ ಆರೋಗ್ಯ ಸರಿಯಿಲ್ಲದ ಕಾರಣ ಮಧುಗಿರಿ ಪಟ್ಟಣದ ರಾಘವೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಲ್ಲಿನ ವೈದ್ಯರು ಗಿರೀಶ್‌ಗೆ ರಕ್ತಪರೀಕ್ಷೆ ಮಾಡಿಸಿ ಜ್ವರ ಬಂದಿದೆ. ಇಂಜೆಕ್ಷನ್‌ ಕೊಡಿಸಿ ಅಂತಾ ಹೇಳಿ ನರ್ಸ್‌ ಬಳಿ ಕಳುಹಿಸಿಕೊಟ್ಟಿದ್ದರಂತೆ. ಆದರೆ ನರ್ಸ್‌ ಸೊಂಟಕ್ಕೆ ಇಂಜೆಕ್ಷನ್‌ ನೀಡುವ ಬದಲು ನರಕ್ಕೆ ಕೊಟ್ಟಿದ್ದಾರಂತೆ. ಇಂಜೆಕ್ಷನ್‌ ಕೊಡುತ್ತಿದ್ದಂತೆ ಬಾಲಕ ನಡೆಯೋದಕ್ಕೂ ಪರದಾಡಿದ್ದಾನೆ. ಹೀಗಾಗಿ ಆತನನ್ನು ಆಟೋದಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾರಂತೆ.

ಮನೆಗೆ ಹೋದ ನಂತರ ಮತ್ತೆ ಕಾಲು ನೋವು ಹೆಚ್ಚಾಗಿದೆ. ಹೀಗಾಗಿ ಗಿರೀಶ್‌ನನ್ನು ಮರುದಿನ ಮತ್ತೆ ರಾಘವೇಂದ್ರ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಡಾಕ್ಟರ್ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದುಕೊಂಡು ಹೋಗುವಂತೆ ರೆಫರ್ ಮಾಡಿದ್ದಾರೆ. ಹೀಗಾಗಿ ತುಮಕೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಾರ್ಥ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.

ಈ ಬಗ್ಗೆ ಟಿಎಚ್‌ಓ ಕೂಡ ಪ್ರತಿಕ್ರಿಯೆ ನೀಡಿದ್ದು, ಎಡಗಾಲಿಗೆ ಇಜೆಂಕ್ಷನ್ ಹಾಕಿದ ಪರಿಣಾಮ ಕಾಲಿನ ಸ್ವಾಧಿನ ಕಳೆದುಹೋಗಿದೆ. ಈ ಬಗ್ಗೆ ತನಿಖೆಗೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದು, ಈ ಬಗ್ಗೆ ಡಿ.ಎಚ್.ಒ ರವರ ಗಮನಕ್ಕೆ ತಂದು ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ವೈದ್ಯರ ಎಡವಟ್ಟಿನಿಂದ ಬಾಲಕ ಕಾಲನ್ನೇ ಕಳೆದುಕೊಂಡಿದ್ದು, ಇದಕ್ಕೆ ಏನು ಕ್ರಮ ಕೈಗೊಳ್ತಾರೆ ಎಂಬುವುದನ್ನು ಕಾದುನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews