ಮಧುಗಿರಿ:
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರದಲ್ಲಿ ವಿಜಯಕರ್ನಾಟಕ ದಿನಪತ್ರಿಕೆ ಸಹಯೋಗದಲ್ಲಿ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ವಿಜಯೀಭವ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಾಗಾರವನ್ನು ತುಮಕೂರು ವಿಶ್ವ ವಿದ್ಯಾನಿಲಯದ ನಾಹಿದಾ ಝಮ್ ಝಮ್ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಸುಮಾರು 12 ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಕೊರಟಗೆರೆ ಪ್ರಿಯದರ್ಶಿನಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ರುದ್ರೇಶ್ 2 ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಮಾರ್ಗದರ್ಶನ ಮತ್ತು ಸಂವಾದ ನಡೆಸಿದರು. ಈ ವೇಳೆ ಶಿಕ್ಷಣಾಧಿಕಾರಿ ರಾಜಣ್ಣ, ಅಕ್ಷರ ದಾಸೋಹ ಅಧಿಕಾರಿ ಚಿತ್ತಯ್ಯ, ಸಂಸ್ಥೆಯ ಕಾರ್ಯದರ್ಶಿ ಎ. ಶ್ರೀನಿವಾಸ್ ರೆಡ್ಡಿ, ಪ್ರಿನ್ಸಿಪಾಲ್ ಜಿ.ಟಿ ಕಲ್ಪನಾ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.
ಕಾರ್ಯಾಗಾರದಲ್ಲಿ ಮಾತನಾಡಿದ ತುಮಕೂರು ವಿವಿ ಕುಲಸಚಿವೆ ನಾಹಿದಾ ಝಮ್ ಝಮ್, ಎಲ್ಲಿವರೆಗೆ ವಿಧ್ಯಾರ್ಥಿಗಳು ಪ್ರಶ್ನಿಸುವುದಿಲ್ಲವೋ ಅಲ್ಲಿವರೆಗೆ ಉತ್ತರ ಮತ್ತು ಯಶಸ್ಸು ಸಿಗುವುದಿಲ್ಲ ಎಂದರು. ವಿಧ್ಯಾರ್ಥಿ ಜೀವನದಲ್ಲಿ ಕನಸು ಮುಖ್ಯ. ಕನಸು ಎಂಬುದು ಎಲ್ಲಿಯವರೆಗೂ ನಿದ್ದೆ ಮಾಡಲು ಬಿಡುವುದಿಲ್ಲವೋ ಅಲ್ಲಿವರೆಗೂ ನಿಮ್ಮ ಕನಸು ನನಸಾಗುವುದಿಲ್ಲ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಸ್ಥೈರ್ಯ ತುಂಬಿದರು.
ಕೊರಟಗೆರೆ ಪ್ರಿಯದರ್ಶಿನಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ರುದ್ರೇಶ್ ಮಾತನಾಡಿ, ಈ ಭಾಗಕ್ಕೆ ವಿಜಯೀಭವ ಕಾರ್ಯಕ್ರಮ ಅವಶ್ಯಕವಾಗಿತ್ತು. ಇದನ್ನು ವಿಜಯ ಕರ್ನಾಟಕ ಪತ್ರಿಕೆ ವೇದಿಕೆ ಕಲ್ಪಿಸಿರುವುದು ಸಂತಸ ತಂದಿದೆ. ಜೀವನದಲ್ಲಿ ಗುರಿ ಇದ್ದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿಧ್ಯಾರ್ಥಿಗಳಲ್ಲಿರುವ ಹೋಲಿಕೆ ಭಾವನೆಯನ್ನು ಹೋಮ ಮಾಡಿ ಗುರಿ, ಪರಿಶ್ರಮ, ಆರೋಗ್ಯ ಮತ್ತು ಯೋಗವನ್ನು ರೂಢಿಸಿಕೊಳ್ಳಬೇಕು ಎಂದರು.
ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ ಹುಲಿ ಹಾಲು ಕುಡಿದವರು ಘರ್ಜಿಸುತ್ತಾರೆ ಎಂಬ ಅಂಬೇಡ್ಕರ್ ಹೇಳಿದ ಮಾತು ಅಕ್ಷರಶಃ ಸತ್ಯ. ಶಿಕ್ಷಣ ಪಡೆದವರು ಇಂದಲ್ಲ ನಾಳೆ ಘರ್ಜಿಸುತ್ತಾರೆ. ವಿಧ್ಯಾರ್ಥಿಗಳು ಸಾಮಾಜಿಕ ಜಾಲತಾಣ ತೊರೆದು ಅಸಾಧ್ಯ ಎಂಬುದನ್ನು ಹಿಮ್ಮಟ್ಟಿ ಸಾಧ್ಯ ಎಂದು ಮುನ್ನುಗ್ಗಬೇಕು ಎಂದು ಮಧುಗಿರಿ ಡಿಡಿಪಿಐ ಗಿರೀಜಾ ತಿಳಿಸಿದರು.
ಶಿಕ್ಷಣ ಸಂಯೋಜಕ ಜಯರಾಮ್ ಮಾತನಾಡಿ, SSLC ಪರೀಕ್ಷೆಗೆ 28 ದಿನ ಉಳಿದಿದೆ. ಈ ಬಾರಿ ಅತ್ಯುತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವಸತಿ ಶಾಲೆಗಳಲ್ಲಿ ನಾನೇ ರಾತ್ರಿ ವೇಳೆ ವಿಶೇಷ ತರಗತಿಗಳನ್ನು ಮಾಡುತಿದ್ದೇನೆ ಎಂದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ಅನ್ನೋದು ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರ್ಯಾಗಾರ ಅವಶ್ಯಕವಾಗಿದ್ದು, ಕಾರ್ಯಾಗಾರದಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಲಿ ಅನ್ನೋದು ಪ್ರಜಾಶಕ್ತಿಯ ಆಶಯವಾಗಿದೆ.