ಮಧುಗಿರಿ:
ಮಧುಗಿರಿ ತಾಲೂಕಿನಲ್ಲಿ ಪ್ರವಾಸದಲ್ಲಿದ್ದ ಸಂಸದ ವಿ. ಸೋಮಣ್ಣ ಅವರು ಪುರವರ ಹೋಬಳಿ ಕೊಂಡವಾಡಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಂಸದ ಸೋಮಣ್ಣಗೆ ಶಾಸಕ ಸುರೇಶ್‌ಗೌಡ ಸಾಥ್ ನೀಡಿದರು. ಈ ವೇಳೆ ದೇವಸ್ಥಾನದ ಸಮಿತಿ ಅಧ್ಯಕ್ಷ ಹಾಗೂ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಸ್ಪೂರ್ತಿ ಚಿದಾನಂದ್, ಹೊಸಹಳ್ಳಿ ನರಸಿಂಹಯ್ಯ, ಸುಮುಖ್ ಚಂದ್ರಶೇಖರ್ ಸೇರಿ ಹಲವರು ಭಾಗಿಯಾಗಿದ್ದರು.
ಬನಶಂಕರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಸಮಿತಿಯಿಂದ ಮನವಿ ಸ್ವೀಕರಿಸಿದ ವಿ. ಸೋಮಣ್ಣ, ದೇವಸ್ಥಾನದ ಅಭಿವೃದ್ಧಿಗೆ 10 ಲಕ್ಷ ವೈಯಕ್ತಿಕವಾಗಿ, 20 ಲಕ್ಷ ಸಂಸದರ ಅನುದಾನದಿಂದ ಕೊಡುತ್ತೇನೆ ಎಂದು ಭರವಸೆ ನೀಡಿದರು. ನೀವು ಸಹಕಾರ ನೀಡಿ ನಾನು ಸುರೇಶ್ ಗೌಡ ಹೇಳಿದಂಗೆ ಕೇಳಿದರೆ 6 ತಿಂಗಳಲ್ಲಿ ಈ ದೇವಸ್ಥಾನವನ್ನು ದೇಶಕ್ಕೆ ಪರಿಚಯಿಸುತ್ತೇನೆ ಎಂದರು.
ಇನ್ನು ನಾನು ತುಮಕೂರು ಸಂಸದನಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಎಲ್ಲವೂ ಕಾಕತಾಳೀಯ. ಸುರೇಶ್ ಗೌಡ ನನಗೆ ಬೆನ್ನೆಲುಬಾಗಿದ್ದರು ಮುಂದೆ ಇವರು ಮಂತ್ರಿಯಾಗುತ್ತಾರೆ. ಮಧುಗಿರಿ ತಾಲೂಕಿನ ಕೆರೆ ತುಂಬಿಸಲು 137 ಕೋಟಿ ಅನುದಾನಕ್ಕೆ ಸಿದ್ಧತೆ ಮಾಡಿದ್ದೇನೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಿದ್ದರೆ ಅದೆಷ್ಟು ಕೋಟಿ ಕಿತ್ತುಕೊಳ್ಳುತಿದ್ದರು ಅದರೆ ಕೇಂದ್ರದಲ್ಲಿ ಅವರ ಸರಕಾರ ಬರಲಿಲ್ಲ ಎಂದರು.
ಶಾಸಕ ಸುರೇಶ್‌ಗೌಡ ಮಾತನಾಡಿ, ಸೋಮಣ್ಣನವರು ಗೆದ್ದಿರುವುದು ಕ್ಷೇತ್ರಕ್ಕೆ ಲಕ್ಷಿ ಬಂದಂತಾಗಿದೆ. ಸೋಮಣ್ಣ ಗೆದ್ದ 8 ತಿಂಗಳಲ್ಲಿ ಒಟ್ಟು 760 ಕೋಟಿ ಅನುದಾನ ತಂದಿದ್ದಾರೆ. ಪ್ರಧಾನ ಮಂತ್ರಿ ಬಳಿ ಡಿ.ಕೆ ಶಿವಕುಮಾರ್ ಅವರನ್ನು ಕರೆದುಕೊಂಡು ಹೋಗಿ ಭಧ್ರ ಮೇಲ್ದಂಡೆಗೆ 5 ಸಾವಿರ ಕೋಟಿ ಬಿಡುಗಡೆಗೆ ಸಭೆ ಮಾಡಿದ್ದಾರೆ ಎಂದರು.