ಬೆಳಗಾವಿ : ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಪ್ಪಾಣಿ ಹೊರವಲಯದ ಕೊಗನೊಳ್ಳಿ ಟೋಲ್ ಪ್ಲಾಜಾದಲ್ಲಿನ ನೆನ್ನೆ ರಾತ್ರಿ ಗಂಭೀರ ಘಟನೆ ನಡೆದಿದೆ. ಡೀಸೆಲ್ ತುಂಬಿಸಿಕೊಂಡು ಹೊರಟಿದ್ದ ಲಾರಿ ಟೋಲ್ ಪ್ಲಾಜಾ ಹತ್ತಿರ ಬಂದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಎರಡು ಟೋಲ್ ಕ್ಯಾಬಿನ್‌ಗಳವರೆಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಘಟನೆ ವೇಳೆ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿ ತಕ್ಷಣ ಸ್ಥಳದಿಂದ ಹೊರಟು ಪ್ರಾಣ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಪರಿಣಾಮವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಈ ಘಟನೆ ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಸದ್ಯ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.