ಬೆಳಗಾವಿ : ಯೋಧನ ಅಂತ್ಯಕ್ರಿಯೆಗಾಗಿ ಸರ್ಕಾರದ ಜಾಗವನ್ನು ಕೇಳಿದ್ದಕ್ಕೆ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್

ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮುರಗೋಡ ಗ್ರಾಮದಲ್ಲಿ ಕರ್ತವ್ಯದಲ್ಲಿರುವಾಗ ಗಾಯಗೊಂಡು ದೆಹಲಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ವಿಷ್ಣು ಕಾರಜೋಳ ಅವರ ಅಂತ್ಯಕ್ರಿಯೆ ವಿವಾದಕ್ಕೆ ಕಾರಣವಾಗಿದೆ. 25 ವರ್ಷದ ಯೋಧ ವಿಷ್ಣು ಕಾರಜೋಳ, ಮೂರು ತಿಂಗಳ ಹಿಂದೆ ಕರ್ತವ್ಯದಲ್ಲಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆಯುತ್ತಿದ್ದ ಅವರು ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದರು.

ಇನ್ನು ಅಂತ್ಯಕ್ರಿಯೆಗಾಗಿ ಸರ್ಕಾರಿ ಜಾಗ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರೂ, ಗ್ರಾಮ ಪಂಚಾಯಿತಿ ಸರ್ಕಾರಿ ಜಾಗವನ್ನು ನೀಡಲು ನಿರಾಕರಿಸಿತು. ಈ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಸೂಚಿಸಿದ್ದರೂ, ಗ್ರಾಮಸ್ಥರು ಆ ನಿರ್ಧಾರವನ್ನು ವಿರೋಧಿಸಿದರು. ಗ್ರಾಮಸ್ಥರ ಪ್ರತಿಭಟನೆಯಲ್ಲಿ ಉದ್ವಿಗ್ನತೆ ಮೂಡಿದ ಪರಿಣಾಮ, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು.ಈ ಲಾಠಿಚಾರ್ಜ್ ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಡರಾತ್ರಿ ಸಾರ್ವಜನಿಕ ಸ್ಮಶಾನದಲ್ಲೇ ಯೋಧ ವಿಷ್ಣು ಕಾರಜೋಳ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಘಟನೆ ಗ್ರಾಮಸ್ಥರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸರ್ಕಾರದ ನೀತಿಯ ವಿರುದ್ಧ ತೀವ್ರ ಅಸಮಾಧಾನ ಮೂಡಿಸಿದೆ. ಯೋಧನ ಅಂತ್ಯಕ್ರಿಯೆಯಂತಹ ಸಂವೇದನಾಶೀಲ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಮತ್ತು ಸ್ಥಳೀಯ ಆಡಳಿತದ ನಿರ್ಧಾರಗಳು ಈಗ ತೀವ್ರ ಚರ್ಚೆಗೆ ಒಳಪಟ್ಟಿವೆ.

 

Author:

...
Keerthana J

Copy Editor

prajashakthi tv

share
No Reviews