ತುಮಕೂರು:
ಕರ್ನಾಟಕದ ಮತ್ತು ಕರುನಾಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿರೋ ಕೆಎಸ್‌ಆರ್‌ಟಿಸಿಗೆ ಇಡೀ ದೇಶದಲ್ಲಿಯೇ ತನ್ನದೇ ಆದ ಘನತೆಯಿದೆ, ಗೌರವವಿದೆ. ಯಾವ ರಾಜ್ಯದ ಸಾರಿಗೆ ಸಂಸ್ಥೆಗಳು ಕೂಡ ನಮ್ಮ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಠಕ್ಕರ್ ಕೊಡೋದಕ್ಕೆ ಸಾಧ್ಯವೇ ಇಲ್ಲ. ಠಕ್ಕರ್ ಕೊಡೋದು ಹಾಗಿರ್ಲಿ, ನಮ್ಮ ಕೆಂಪು ಸುಂದರಿಯರ ಹತ್ತಿರ ಹತ್ತಿರಕ್ಕೂ ಸುಳಿಯೋದಕ್ಕಾಗಲ್ಲ. ಅಷ್ಟರ ಮಟ್ಟಿಗೆ ಖ್ಯಾತಿ ಗಳಿಸಿವೆ ನಮ್ಮ ಕೆಎಸ್‌ಆರ್‌ಟಿಸಿ ಬಸ್‌ಗಳು. ಆದ್ರೆ ಇತ್ತೀಚೆಗೆ ತುಮಕೂರಿನಲ್ಲಿ ಅದೇನಾಗಿದ್ಯೋ ಗೊತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೋ, ಸಿಬ್ಬಂದಿಯ ಎಡವಟ್ಟೋ ಏನ್ ಕಥೆನೋ ಗೊತ್ತಿಲ್ಲ. ಜನರ ಸಂಚಾರದ ಜೀವನಾಡಿಯಾಗಬೇಕಿದ್ದ ಬಸ್‌ಗಳು ಯಮಧೂತರಂತೆ ಕಾಣಿಸ್ತಿವೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ತುಮಕೂರು ನಗರದ ಟೌನ್‌ಹಾಲ್ ವೃತ್ತದ ಬಳಿ ರಸ್ತೆ ಕ್ರಾಸ್ ಮಾಡ್ತಿದ್ದ ಮಹಿಳೆಯ ಮೇಲೆ ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದರ ಸಿಸಿಟಿವಿ ದೃಶ್ಯ ಕೂಡ ವೈರಲ್ ಆಗಿತ್ತು. ಕೆಎಸ್ಆರ್‌ಟಿಸಿ ಬಸ್ ರೂಪದಲ್ಲಿ ಬಂದಿದ್ದ ಯಮರಾಯನನ್ನ ಕಂಡು ಜನರು ಬೆಚ್ಚಿಬಿದ್ದಿದ್ರು. ಈ ಘಟನೆ ಮಾಸುವ ಮುನ್ನವೇ ತುಮಕೂರಿನಲ್ಲಿ ಕೆಎಸ್‌ಆರ್‌ಟಿಸಿ ಎಡವಟ್ಟಿನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಸಾರಿಗೆ ಬಸ್‌ನಲ್ಲಿ ೫೦ಕ್ಕೂ ಹೆಚ್ಚು ಪ್ರಯಾಣಿಕರಿರ್ತಾರೆ. ಈಗ ಶಕ್ತಿ ಯೋಜನೆ ಜಾರಿಯಲ್ಲಿರೋದ್ರಿಂದ ಯಾವಾಗಲೂ ಬಸ್ ತುಂಬಿ ತುಳುಕುತ್ತಿರುತ್ತೆ. ಇವರೆಲ್ಲರು ಕೂಡ ಚಾಲಕನನ್ನೇ ನಂಬಿರ್ತಾರೆ. ಆದ್ರೆ ಇಲ್ಲೊಬ್ಬ ಬಸ್ ಚಾಲಕ ಬ್ರೇಕ್ ಇಲ್ಲದ ಬಸ್ಸನ್ನ ರಸ್ತೆಗಿಳಿಸಿ ಬೇಜವಾಬ್ದಾರಿತನ ತೋರಿಸಿದ್ದು, ಭಾರೀ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ನಗರದ ಕಾಲ್ ಟ್ಯಾಕ್ಸ್ ಸರ್ಕಲ್‌ನಲ್ಲಿ ನಡೆದ ಅಪಘಾತದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ನಿನ್ನೆ ಸಾಯಂಕಾಲ ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗ್ತಿದ್ದ ಬಸ್ ಮತ್ತು ಆಟೋ ನಡುವೆ ಕಾಲ್ ಟ್ಯಾಕ್ಸ್ ಅಪಘಾತ ಸಂಭವಿಸಿದೆ. ಈ ವೇಳೆ ಬಸ್ ಡ್ರೈವರ್ ಮತ್ತು ಆಟೋ ಡ್ರೈವರ್ ನಡುವೆ ವಾದ ಶುರುವಾಗಿದೆ. ಈ ವೇಳೆ ಬಸ್ ಚಾಲಕ ತನ್ನದೇನು ತಪ್ಪೇ ಇಲ್ಲ ಅಂತಾ ವಾದಿಸಿದ್ದಾನೆ. ಮೊದಲು ತನ್ನದೇನು ತಪ್ಪೇ ಇಲ್ಲಾ ಅಂತಲೇ ವಾದಿಸಿದ ಡ್ರೈವರ್, ಬಳಿಕ ಬಸ್‌ನ ಬ್ರೇಕ್ ಸರಿಯಿಲ್ಲ ಅಂತಾ ಹೇಳಿದ್ದಾನೆ. ನಾನು ಇದನ್ನ ಸಂಬಂಧಪಟ್ಟವರಿಗೆ ತಿಳಿಸಿದ್ರೂ ಕೂಡ ಅವ್ರು ಇದೇ ಗಾಡಿ ತೆಗೆದುಕೊಂಡು ಹೋಗಲು ಹೇಳಿದ್ದಾರೆ. ಅದಕ್ಕೆ ತಾನು ತಂದಿದ್ದೇನೆ ಅಂತಾ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾನೆ.
ಇಷ್ಟೆಲ್ಲಾ ಜನ ಪ್ರಯಾಣಿಕರಿದ್ದಾರೆ. ಬ್ರೇಕ್ ಇಲ್ಲದ ಬಸ್ಸನ್ನ ರಸ್ತೆಗಿಳಿಸಿದ್ದೀಯಾ. ಅವ್ರ ಜೀವಕ್ಕೆ ಬೆಲೆನೇ ಇಲ್ವಾ? ಅಂತಾ ಪ್ರಶ್ನಿಸಿದ್ರೆ, ನನ್ನ ಜೀವಕ್ಕೇನೇ ಬೆಲೆಯಿಲ್ಲ. ಅವ್ರ ಜೀವದ ಬೆಲೆ ಕಟ್ಕೊಂಡ್ ನಾನೇನ್ ಮಾಡ್ಲಿ ಅಂತಾ ಅಹಂಕಾರದ ಮಾತುಗಳನ್ನಾಡಿದ್ದಾನೆ.
ಬಸ್ ಡ್ರೈವರ್ ಮಾತಿಗೆ ಸ್ಥಳೀಯರು ಮತ್ತು ಆಟೋ ಚಾಲಕರು ಸಿಟ್ಟಾಗಿದ್ದಾರೆ. ಬ್ರೇಕ್ ಇಲ್ಲದ ಬಸ್ಸನ್ನ ಈತ ರಸ್ತೆಗೆ ಹೇಗೆ ಇಳ್ಸಿದ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಚಾಲಕರ ವಿರುದ್ಧ ಕ್ರಮವಾಗಬೇಕು. ಜೊತೆಗೆ ಈತ ಕೆಎಸ್‌ಆರ್‌ಟಿಸಿಯಲ್ಲಿ ಕಾಂಟ್ರ್ಯಾಕ್ಟ್ ಬೇಸ್ ಮೇಲೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾನಂತೆ. ಸರ್ಕಾರ ಮೊದಲು ಕಾಂಟ್ರಾಕ್ಟ್ ಬೇಸ್ ಮೇಲೆ ಡ್ರೈವರ್ ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಚಾಲಕನ ಕೆಲಸ ತುಂಬಾ ಜವಾಬ್ದಾರಿಯುತ ಕೆಲಸ. ಅದನ್ನ ಮರೆತು ಪ್ರಯಾಣಿಕರ ಜೀವದ ಜೊತೆ ಹೀಗೆ ಚೆಲ್ಲಾಟವಾಡಬಾರದು ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ೫೦ ಜನ ಹೋಗಬನೇಕಾದ ಬಸ್ಸಿನಲ್ಲಿ ನೂರಕ್ಕೂ ಹೆಚ್ಚು ಜನ ಹೋಗ್ತಿದ್ದಾರೆ. ಈ ಭಾರವನ್ನ ಆ ಗಾಡಿ ತಡೆದುಕೊಳ್ಳೋದು ಹೇಗೆ. ಇನ್ನು ಗಾಡಿ ಫಿಟ್ನೆಸ್ ಜೊತೆ ಗಾಡಿ ಓಡಿಸುವ ಬಾಡಿ ಸಹ ಫಿಟ್ ಆಗಿರಬೇಕು. ಇಲ್ಲವಾದರೆ ಬಸ್ಸಲ್ಲಿ ಪ್ರಯಾಣ ಮಾಡುವ ಜನರ ಜೀವಕ್ಕೆ ಕುತ್ತು ಬರುತ್ತೆ ಅಂತಾರೆ ಸ್ಥಳೀಯರು.
ಒಂದು ಕಡೆ ಇದರಲ್ಲಿ ಚಾಲಕನ ತಪ್ಪಿದೆ. ಮತ್ತೊಂದೆಡೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ತಪ್ಪೂ ಇದೆ. ಬ್ರೇಕ್ ಇಲ್ಲ ಅಂತಾ ಹೇಳಿದ ಮೇಲೆಯೂ ಅದೇ ಬಸ್ಸನ್ನ ಕಳುಹಿಸ್ತಾರೆ ಅಂದ್ರೆ ಅವರ ಬೇಜವಾಬ್ದಾರಿತನ ಎಷ್ಟರ ಮಟ್ಟಿಗಿದೆ ನೀವೇ ಯೋಚನೆ ಮಾಡಿ.