ಪಾವಗಡ:
ಕಾಂಗ್ರೆಸ್ ನಾರಿಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾದಾಗನಿಂದ ರಾಜ್ಯದ ಹಲವೆಡೆ ಗಲಾಟೆಗಳು ನಡೆಯುತ್ತಲೇ ಇದ್ದಾವೆ.. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಘಟನೆ ಮಾಸುವ ಮುನ್ನವೇ ತುಮಕೂರಿನ ಗಡಿ ತಾಲೂಕಾದ ಪಾವಗಡದಲ್ಲಿ KSRTC ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪಾವಗಡದಿಂದ ತುಮಕೂರು ಕಡೆ ತೆರಳುತ್ತಿದ್ದ KSRTC ಬಸ್ ಕಂಡಕ್ಟರ್ ಅನಿಲ್ ಕುಮಾರ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ಜರುಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ಕೈ ಕೈ ಮಿಲಾಯಿಸಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಕಂಡಕ್ಟರ್ ಮೇಲೆ ನಾಲ್ಕೈದು ಮಂದಿ ಮುಗಿಬಿದ್ದಿದ್ದು ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಿಡಿಸಲು ಬಂದ ಬಸ್ ಡ್ರೈವರ್ ಮಾರುತಿ ಮೇಲೂ ಹಲ್ಲೆ ಮಾಡಿದ್ದಾರೆ. ಬಸ್ ಡ್ರೈವರ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಸದ್ಯ ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅದ್ರಲ್ಲೂ ಫ್ರೀ ಬಸ್ ಜಾರಿಗೆ ಬಂದಾಗಿನಿಂದ ಸೀಟ್ ವಿಚಾರಕ್ಕೆ ಕಿತ್ತಾಡಿ ಕೊಳ್ಳೋದು ಬೆಳಕಿಗೆ ಬರ್ತಾ ಇತ್ತು. ಇದೀಗ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು ಸರ್ಕಾರಿ ಸೇವೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕಿದೆ.