ಕೊರಟಗೆರೆ : ನಾಟಕಗಳು ನಡೆಯುತ್ತಿದ್ದ ಕಾಲದಿಂದಲೂ ಕೊರಟಗೆರೆಯ ಜನರಿಗೆ ಮನರಂಜನೆ ನೀಡುತ್ತಿದ್ದದ್ದು ಒಂದೇ ಟಾಕೀಸ್ ಅದು ಶಿವಗಂಗಾ ಚಿತ್ರಮಂದಿರ. ಕೊರಟಗೆರೆ ತಾಲೂಕಿನಲ್ಲಿ ಈ ಶಿವಗಂಗಾ ಚಿತ್ರಮಂದಿರ ಬಿಟ್ಟರೇ ಬೇರೆ ಯಾವುದು ಇಲ್ಲ. ಟಿವಿ, ಮೊಬೈಲ್ ಬಳಕೆ ಇಲ್ಲದ ಕಾಲದಲ್ಲಿ ಟೆಂಟ್ ಮಾದರಿಯಲ್ಲಿ ನಿರ್ಮಾಣಗೊಂಡು ಜನರಿಗೆ ಮನರಂಜನೆ ನೀಡುತ್ತಿತ್ತು. ಆದರೆ ಇಂತಹ ಚಿತ್ರಮಂದಿರಕ್ಕೆ ಇದೀಗ ಬೀಗ ಬಿದ್ದಿದ್ದು, ತಾಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.
ಇಂದು ಬೆಳಗ್ಗೆ ಏಕಾಏಕಿ ಭೇಟಿ ನೀಡಿದ ಪಟ್ಟಣ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಮೇಶ್ ಹಾಗೂ ಅಧಿಕಾರಿಗಳ ತಂಡ ಶಿವಗಂಗಾ ಚಿತ್ರಮಂದಿರಕ್ಕೆ ಬೀಗ ಜಡಿದಿದ್ದಾರೆ. 10 ಲಕ್ಷಕ್ಕೂ ಅಧಿಕ ಕಂದಾಯ ಬಾಕಿ ಉಳಿಸಿಕೊಂಡಿದೆ. ಈ ಕುರಿತು ನಾವು ಹಲವು ಬಾರಿ ನೋಟೀಸ್ ನೀಡಿದ್ದರು ಮಾಲೀಕರು ಸ್ಪಂದಿಸುತ್ತಿರಲಿಲ್ಲ. ಆ ಕಾರಣಕ್ಕೆ ಚಿತ್ರಮಂದಿರವನ್ನು ಬಂದ್ ಮಾಡುತ್ತಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಇನ್ನು ಥಿಯೇಟರ್ ಮ್ಯಾನೇಜರ್ ಅನಿಲ್ ಕುಮಾರ್ ಮಾತನಾಡಿ, ಸರ್ ಇದುವರೆವಿಗೂ ನಮಗೆ ನೋಟೀಸ್ ಬಂದಿಲ್ಲ. ಯಾವಾಗಲೋ ಒಮ್ಮೆ ಮಾತ್ರ ಬಂದಿತ್ತು. ಆದಾದ ಮೇಲೆ ಬಂದಿಲ್ಲ, ನೊಟೀಸ್ ನಲ್ಲಿ ಇರೋದು 20ನೇ ತಾರೀಕು ಅಂತಾ. ಆದರೆ ನಮಗೆ ನೊಟೀಸ್ ಕೊಟ್ಟಿಲ್ಲ. ಈಗ ನೋಡಿದರೆ ಬಂದು ಬೀಗ ಹಾಕಿದ್ದಾರೆ. ಇದು ಯಾವ ನ್ಯಾಯ ಅಂತ ಪ್ರಶ್ನಿಸುತ್ತಿದ್ದಾರೆ.
ಇನ್ನು ಶಿವಗಂಗಾ ಚಿತ್ರಮಂದಿರದೊಂದಿಗೆ ಶಿವಗಂಗಾ ಕಲ್ಯಾಣ ಮಂಟಪ ಹಾಗೂ ಶಿವಗಂಗಾ ಹೋಟೆಲ್ ಕೂಡ ಬಂದ್ ಮಾಡಲಾಗಿದೆ. ಅದೇನೇ ಇರಲಿ ಕೊರಟಗೆರೆ ಜನರಿಗೆ ಮನರಂಜನೆ ನೀಡುತ್ತಿದ್ದ ಹಳೆಯ ಥಿಯೇಟರ್ ಮುಚ್ಚಿರುವುದು ತಾಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.