ಕೊರಟಗೆರೆ:
ಗೃಹ ಸಚಿವರ ತವರು ಕ್ಷೇತ್ರದಲ್ಲಿ ಮೈಕ್ರೋ ಫೈನಾನ್ಸ್‌ಗಳ ದಬ್ಬಾಳಿಕೆ ಎಲ್ಲೆ ಮೀರಿದೆ. ಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರಿ ತಂದಿದ್ದರು ಕೂಡ ಕೆಲ ಮೈಕ್ರೋ ಫೈನಾನ್ಸ್ ಏಜೆಂಟ್‌ಗಳು ಸಾಮಾನ್ಯ ಜನರ ಮೇಲೆ ದರ್ಪ ತೋರುತ್ತಲೇ ಇದ್ದಾರೆ. ತುಮಕೂರಿನಲ್ಲಿ ಈಗಾಗಲೇ ಮೈಕ್ರೋ ಫೈನಾನ್ಸ್ ಕಾಟಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ, ಶಿರಾದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಓರ್ವ ಮಹಿಳೆ ನೇಣಿಗೆ ಶರಣಾಗಿದ್ದರು. ಇದೀಗ ಮೈಕ್ರೋ ಫೈನಾನ್ಸ್ ಭೂತದ ಮತ್ತೊಂದು ಕ್ರೌರ್ಯ ಬೆಳಕಿಗೆ ಬಂದಿದೆ. ಇಕ್ವಿಟಾಸ್ ಎಂಬ ಮೈಕ್ರೋ ಕಂಪನಿಯು ಸಾಲ ಪಡೆದಿರುವ ಅಮಾಯಕರ ಮೇಲೆ ದಬ್ಬಾಳಿಕೆ ತೋರಿದ್ದು, ಸಾಲಗಾರರ ಮನೆಯನ್ನು ಸೀಜ್ ಮಾಡಿರುವ ಅಮಾನವೀಯ ಘಟನೆ ನಡೆದುಹೋಗಿದೆ.
ಈ ಅಮಾನವೀಯ ಘಟನೆಗೆ ಸಾಕ್ಷಿಯಾಗಿರೋದು ಗೃಹ ಸಚಿವರ ತವರು ಕ್ಷೇತ್ರವಾದ ಕೊರಟಗೆರೆ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ. ಗ್ರಾಮದ ನಾಗರಾಜು, ಸುಶೀಲಮ್ಮ ದಂಪತಿಯ ಪುತ್ರ ಸಂಪತ್ ಎಂಬಾತ ಇಕ್ವಿಟಾಸ್ ಎಂಬ ಫೈನಾನ್ಸ್ ಕಂಪನಿಯಲ್ಲಿ ಮನೆ ಮೇಲಿನ ಶ್ಯೂರಿಟಿ ಮೇಲೆ 2020ರಲ್ಲಿ ಸುಮಾರು 5 ಲಕ್ಷ ಸಾಲವನ್ನು ಪಡೆದಿದ್ದರು. ಈವರೆಗೂ ಸುಮಾರು 4.92 ಸಾವಿರ ರೂಪಾಯಿಯನ್ನು ಸಂಪತ್ ಕಟ್ಟಿದ್ದಾರೆ. ಆದರೆ ದಂಡ ಹಾಗೂ ಬಡ್ಡಿ ಸೇರಿ ಸುಮಾರು 7 ಲಕ್ಷದ 43 ಸಾವಿರದ 545 ಹಣ ಕಟ್ಟುವಂತೆ ಕಿರುಕುಳ ಕೊಡ್ತಾ ಇದ್ದಾರಂತೆ. ಅಲ್ಲದೇ ಮನೆ ಸೀಜ್ ಮಾಡಿದ್ದು ಜಿರಳೆ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಪತ್ ತಂದೆ ನಾಗರಾಜು ಹೇಳುತ್ತಿದ್ದಾರೆ.
ಸಂಪತ್ ಕಳೆದ ವರ್ಷ ಏಪ್ರಿಲ್ ನಿಂದ ಸಾಲದ ಕಂತು ಹಣವನ್ನು ಕಟ್ಟದೇ ಬಾಕಿ ಉಳಿಸಿಕೊಂಡಿದ್ದನಂತೆ, ಕಳೆದ ಮೂರು ತಿಂಗಳಿನಿಂದ ಸಂಪತ್ ನಾಪತ್ತೆಯಾಗಿದ್ದಾರೆ. ಮೊನ್ನೆ ಶುಕ್ರವಾರ ನಾವು ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬೀಗ ಹಾಕಿ, ನೋಟಿಸ್ ಅಂಟಿಸಿ ಹೋಗಿದ್ದಾರೆ. ನಾವು ಬಡವರು ಕೂಲಿ ಮಾಡಿ ಜೀವನ ಮಾಡ್ತಾ ಇರೋರು 2 ಲಕ್ಷ ತಂದಿದ್ದರು ಅದನ್ನು ಪಡೆಯದೇ ನಮಗೆ ಪೂರ್ತಿ ಹಣ ಕೊಡಿ ಅಂತಾ ಪಟ್ಟು ಹಿಡಿದ್ಧಾರೆ, ಮನೆ ಹೊರಗೆ ಮಲಗಲು ಸಾಧ್ಯ ಆಗ್ತಾ ಇಲ್ಲ ಅಂತಾ ಸುಶೀಲಮ್ಮ ಕಣ್ಣೀರಾಕ್ತಿದ್ದಾರೆ. ಜಿರಳೆ ಔಷಧಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಪತ್ ತಾಯಿ ಸುಶೀಲಮ್ಮ ಹೇಳ್ತಿದ್ದಾರೆ.
ಇಕ್ವಿಟಾಸ್ ಫೈನಾನ್ಸ್ ಕಿರುಕುಳದ ಬಗ್ಗೆ ಸಿಬ್ಬಂದಿ ರಾಕೇಶ್ ಪ್ರತಿಕ್ರಿಯೆ ನೀಡಿದ್ದು, ನಾವು ದಬ್ಬಾಳಿಕೆ ಮಾಡಿಲ್ಲ ಇದಕ್ಕೂ ಮೊದಲು ಮನೆ ಬಳಿ ಹೋಗಿ ಸಾಲದ ಕಂತು ಕಟ್ಟುವಂತೆ ಕೇಳಿದ್ದೇವು. ಆದರೆ ಕಟ್ಟುತ್ತೀವಿ ಅಂತಾ ಹೇಳಿ ಸುಮ್ಮನೆ ಆಗ್ತಾ ಇದ್ರು, ಕಳೆದ ತಿಂಗಳು ಕೋರ್ಟ್ ಆದೇಶವನ್ನು ಕೂಡ ತಗೊಂಡು ಹೋಗಿ ಹೇಳಿದ್ದೀವಿ. ಆದರೆ ಅವರು ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ಪೊಲೀಸರಿಗೆ ಈ ಬಗ್ಗೆ ತಿಳಿಸಿ ಲಾಯರ್ ಜೊತೆ ಹೋಗಿ ರೂಲ್ಸ್ ಪ್ರಕಾರ ಸೀಜ್ ಮಾಡಿದ್ದೀವಿ ಎಂದು ಸಿಬ್ಬಂದಿ ಆರೋಪಕ್ಕೆ ಪ್ರತ್ಯುತ್ತರ ನೀಡ್ತಾ ಇದ್ದಾರೆ.
ಒಟ್ಟಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಸುಗ್ರೀವಾಜ್ಞೆಗೂ ಕೇರ್ ಮಾಡದೇ ಪೆಡಂಭೂತದಂತೆ ಜನರ ಪ್ರಾಣ ಹಿಂಡುತ್ತಿದ್ದು, ಇನ್ನು ಅದೆಷ್ಟು ಅಮಾಯಕರನ್ನು ಬಲಿ ಪಡಿಯುತ್ತೋ ಆ ದೇವರೇ ಬಲ್ಲ. ಸರ್ಕಾರ ಸುಗ್ರೀವಾಜ್ಞೆ ಜೊತೆಗೆ ಮತ್ತಷ್ಟು ಕಠಿಣ ಕ್ರಮ ಜರುಗಿಸುವ ಮೂಲಕ ಅಮಾಯಕರನ್ನು ರಕ್ಷಿಸಬೇಕಿದೆ.