ಕೊರಟಗೆರೆ:
ಕೊರಟಗೆರೆ ತಾಲೂಕಿನ ಗೆದ್ಮೇನಹಳ್ಳಿ, ಸುಕದಹಳ್ಳಿ ಗ್ರಾಮಗಳ ನಡುವೆ ಇರೋ ಇತಿಹಾಸ ಪ್ರಸಿದ್ಧ ಹೊಳೆ ನಂಜುಂಡೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಶಿವರಾತ್ರಿ ಹಬ್ಬದಂದು ವಿಜೃಂಭಣೆಯಿಂದ ಜರುಗಿತು. ಜಾತ್ರೆ ಅಂಗವಾಗಿ ಹಾಗೂ ಶಿವರಾತ್ರಿ ಅಂಗವಾಗಿ ಶ್ರೀ ಹೊಳೆ ನಂಜುಡೇಶ್ವರ ಸ್ವಾಮಿ ದೇಗುಲಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಈ ದೇಗುಲಕ್ಕೆ ಅಕ್ಕ ಪಕ್ಕದ ಗ್ರಾಮಗಳ ಭಕ್ತರಲ್ಲದೇ ರಾಜಕಾರಣಿಗಳು, ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿರೋದರಿಂದ ಅಹಿತಕರ ಘಟನೆ ನಡೆಯದಂತೆ ಕೋಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಯೋಗೇಶ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಜಾತ್ರೆಗೆ ಬಂದ ಭಕ್ತರಿಗೆ ಪೂಜೆ ಬಳಿಕ ವಿಶೇಷ ಪ್ರಸಾದ, ಮಜ್ಜಿಗೆ, ಪಾನಕ, ಹೆಸರುಬೇಳೆಯನ್ನ ಪ್ರಸಾದ ರೂಪದಲ್ಲಿ ವಿತರಿಸಲಾಯ್ತು. ಅಲ್ಲದೇ ಪ್ರಸಾದ ವ್ಯವಸ್ಥೆಯನ್ನು ಸ್ವತಃ ಭಕ್ತರೇ ಸ್ವಯಂ ಪ್ರೇರಿತರಾಗಿ ತಯಾರು ಮಾಡಿದ್ರು. ಚಿನ್ನಹಳ್ಳಿ ಗ್ರಾಮದ ಜಗದೀಶ್ ಅವರ ಕುಟುಂಬದ ವತಿಯಿಂದ ಪ್ರತಿ ವರ್ಷವೂ ಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಬೆಳಗ್ಗಿನಿಂದ ಸಂಜೆವರೆಗೂ ನೆರವೇರಿಸುತ್ತಾ ಬಂದಿದ್ದಾರೆ.
ಇನ್ನು, ಕೇಂದ್ರ ಸಚಿವ ವಿ. ಸೋಮಣ್ಣನವರು ಈ ಹೊಳೆ ನಂಜುಂಡೇಶ್ವರ ಸ್ವಾಮಿಯ ಪರಮ ಭಕ್ತರಾಗಿದ್ದು, ಪ್ರತಿ ವರ್ಷವೂ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆಯುತ್ತಾರೆ ಅಂತೆ. ಇಂದು ಕೂಡ ಅವರ ಧರ್ಮಪತ್ನಿ ಶ್ರೀ ಸ್ವಾಮಿಯ ದರ್ಶನ ಪಡೆದು ಹೋಗಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ತಿಳಿಸಿದರು.