ಕೊರಟಗೆರೆ:
ಇಂದು ಕರ್ನಾಟಕ ರತ್ನ, ನಗುವಿನ ಒಡೆಯ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮ ದಿನವನ್ನು ಇಡೀ ರಾಜ್ಯಾದ್ಯಂತ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡ್ತಾ ಇದ್ದಾರೆ. ಪುನೀತ್ ಅವರಂತೆ ಅಭಿಮಾನಿಗಳು ಅದೆಷ್ಟೋ ಸಮಾಜ ಮುಖಿ ಕಾರ್ಯಗಳನ್ನು ಅಪ್ಪು ಹುಟ್ಟಿದ ದಿನದಂದು ಮಾಡ್ತಾ ಇದ್ದಾರೆ. ತುಮಕೂರು ಜಿಲ್ಲೆಯಲ್ಲೂ ಅಪ್ಪು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡ್ತಾ ಇದ್ದಾರೆ.
ಕೊರಟಗೆರೆಯಲ್ಲಿ ಅಪ್ಪು ಅಭಿಮಾನಿಗಳು ಶಾಲಾ ಮಕ್ಕಳಿಗೆ ಲೇಖನಾ ಸಲಕರಣೆಗಳನ್ನು ವಿತರಣೆ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಅಭಿಮಾನಿಗಳು 13 ಸರ್ಕಾರಿ ಶಾಲೆಯ ಸುಮಾರು 250 ಮಕ್ಕಳಿಗೆ ಕಲಿಕಾ ಸಮಾಗ್ರಿಗಳನ್ನು ವಿತರಿಸುವ ಮೂಲಕ ಪುನೀತ್ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಬೈಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭಕ್ತರಹಳ್ಳಿ, ಹನುಮೇನಹಳ್ಳಿ, ಚಿಕ್ಕನಹಳ್ಳಿ, ಬುಡ್ಡೇನಹಳ್ಳಿ, ಬೈಚಾಪುರ, ರಾಯವಾರ, ರಾಯವಾರ ಕಾಲೋನಿ, ಕ್ಯಾಶವಾರ, ರೆಡ್ಡಿಹಳ್ಳಿ ಮತ್ತು ಬಸವನಹಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 250 ಮಕ್ಕಳಿಗೆ ಜಾಮಿಟ್ರಿ ಬಾಕ್ಸ್, ನೋಟ್ ಬುಕ್, ಸಿಹಿ ಹಂಚಿ ಸಂಭ್ರಮಿಸಿದರು.
ಬೈಚಾಪುರ ಗ್ರಾಮದ ಅಪ್ಪು ಅಭಿಮಾನಿಗಳು ಪ್ರತಿ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸಮಾಜ ಮುಖಿ ಕೆಲಸ ಮಾಡಿಕೊಂಡು ಬರ್ತಾ ಇದ್ದು, ಮುಂದಿನ ವರ್ಷ ಅಪ್ಪು ಹಬ್ಬಕ್ಕೆ 50ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನಾ ಸಮಾಗ್ರಿಗಳನ್ನು ವಿತರಣೆ ಮಾಡುವ ಭರವಸೆ ನೀಡಿದರು.