ಕಾರವಾರ:
ಕಾರವಾರ INS ಕದಂಬ ನೌಕಾನೆಲೆಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈ ಹಿಂದೆ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ.
ಕಾರವಾರ ತಾಲೂಕಿನ ಮುದಗಾದದ ವೇತನ್ ತಾಂಡೇಳ್ ಹಾಗೂ ಅಂಕೋಲಾದ ಅಕ್ಷಯ್ ಎಂಬುವವರನ್ನು ಹೈದರಾಬಾದ್ ಮೂಲದ ಎನ್ಐಎ ಪೊಲೀಸರು ಬಂಧಿಸಿದ್ದಾರೆ. ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್ಐಎ ನೋಟೀಸ್ ನೀಡಿ ಬಿಟ್ಟಿತ್ತು. ಇದೀಗ ಮತ್ತೆ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿದ್ದ ಎನ್ಐಎ ತಂಡ ಇಬ್ಬರನ್ನು ಬಂಧಿಸಿದೆ.
ಆರೋಪಿಗಳು 2023ರಲ್ಲಿ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಪಾಕ್ ನಾ ಏಜೆಂಟ್ ಮಹಿಳೆ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಆಕೆ ತಾನು ನೌಕದಳದ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನೌಕದಳದ ನೌಕೆಗಳು, ಅದರ ಚಲನವಲನ, ನೌಕೆಗಳ ಚಿತ್ರಗಳು, ಕದಂಬ ನೌಕದಳದ ಸ್ಥಳಗಳ ಮಾಹಿತಿ ಪಡೆದಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ಹಿಂದೆ ವಶಕ್ಕೆ ಪಡೆದವರನ್ನು ಇದೀಗ ಮತ್ತೆ ವಿಚಾರಣೆಗೆ ಒಳಪಡಿಸಿ, ಹೊಸ ಲಿಂಕ್ನ ಬಗ್ಗೆ ತನಿಖೆ ನಡೆಸಲು ಎನ್ಐಎ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ನೌಕಾ ನೆಲೆ ಮಾಹಿತಿ ಸೋರಿಕೆ ಸಂಬಂಧಿಸಿ ಇಂದು ನೌಕಾನೆಲೆ ಅಧಿಕಾರಿಗಳನ್ನು ಎನ್ಐಎ ಅಧಿಕಾರಿಗಳ ತಂಡ ಭೇಟಿಯಾಗಿದ್ದು. ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿರುವ ಅನುಮಾನದ ಕಾರಣ ಮತ್ತಷ್ಟು ತನಿಖೆ ನಡೆಯಲಿದೆ.