ಕರ್ನಾಟಕ : ಐಪಿಎಲ್ ಬೆಟ್ಟಿಂಗ್ ಪ್ರಮೋಟ್ ಮಾಡ್ತಿದ್ದವ್ರಿಗೆ ಪೊಲೀಸರಿಂದ ನೊಟೀಸ್

ಕರ್ನಾಟಕ :

ಚುಟುಕು ಕ್ರಿಕೆಟ್‌ ಸಮರ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಟೂರ್ನಿ ಅಂತಲೇ ಕರೆಸಿಕೊಳ್ಳೋ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿ ಶುರುವಾಗಿದೆ. ದಿನದಿಂದ ದಿನಕ್ಕೆ ಐಪಿಎಲ್‌ನ ಕಾವು ಹೆಚ್ಚಾಗ್ತಿದ್ದು, ಕ್ರಿಕೆಟ್‌ ಪ್ರೇಮಿಗಳು ಐಪಿಎಲ್‌ ಗುಂಗಿನಲ್ಲಿ ಮುಳುಗಿಹೋಗಿದ್ದಾರೆ. ಇನ್ನು ಈ ಐಪಿಎಲ್‌ ಕ್ರೇಜ್‌ ಅನ್ನೇ ಕೆಲವು ಆನ್‌ಲೈನ್‌ ಆಪ್‌ಗಳು ಜನರಿಗೆ ಬೆಟ್ಟಿಂಗ್‌ ಹುಚ್ಚನ್ನು ಹಿಡಿಸುತ್ತಿವೆ. ಇದೇ ರೀತಿಯ ಆನ್‌ಲೈನ್‌ ಬೆಟ್ಟಿಂಗ್‌ ಆಪ್‌ಗಳನ್ನು ಪ್ರಚಾರ ಮಾಡ್ತಿದ್ದ ರೀಲ್ಸ್‌ ರಾಜ, ರಾಣಿಯರಿಗೆ ಇದೀಗ ಪೊಲೀಸರು ಶಾಕ್‌ ನೀಡಿದ್ದಾರೆ.

ಬೆಟ್ಟಿಂಗ್‌ ಕೂಡ ಒಂದು ಜೂಜಾಟವಾಗಿದ್ದು, ಈ ಜೂಜಿನ ಮೋಜಿಗೆ ಬಿದ್ದು ಅದೇಷ್ಟೋ ಮಂದಿ ಹಣ, ಆಸ್ತಿ ಮಾತ್ರವಲ್ಲ, ಕೊನೆಗೆ ಮನೆ, ಮಠ ಎಲ್ಲವನ್ನು ಕಳೆದುಕೊಂಡು ಪ್ರಾಣಕ್ಕೂ ಸಂಚಕಾರ ತಂದುಕೊಳ್ತಾರೆ. ಇದೇ ಕಾರಣಕ್ಕೆ ಸದ್ಯ ನಮ್ಮ ದೇಶದಲ್ಲಿ ಇಂತಹ ಯಾವುದೇ ಬೆಟ್ಟಿಂಗ್‌ಗೆ ಅನುಮತಿಯನ್ನು ಕೊಟ್ಟಿಲ್ಲ. ಆದರೂ ಕೂಡ ಕೆಲವು ಆನ್‌ಲೈನ್‌ ಆಪ್‌ಗಳ ಮೂಲಕ ಈ ಬೆಟ್ಟಿಂಗ್‌ ನಡೆಯುತ್ತಲೇ ಇದೆ. ಜೊತೆಗೆ ಈ ಆನ್‌ಲೈನ್‌ ಆಪ್‌ಗಳನ್ನು ಪ್ರಚಾರ ಮಾಡೋದಕ್ಕೆ ರೀಲ್ಸ್‌, ಶಾರ್ಟ್ಸ್‌ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿರುವ ಕೆಲವು ಇನ್‌ಫ್ಲುಯೆನ್ಸರ್‌ಗಳಿಗೆ ಹಣದ ಆಮಿಷವನ್ನು ಒಡ್ಡುತ್ತಿವೆ. ಈ ಹಣದ ಆಸೆಗೆ ಬಿದ್ದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಆನ್‌ಲೈನ್‌ ಬೆಟ್ಟಿಂಗ್‌ ಆಪ್‌ಗಳನ್ನು ಪ್ರಮೋಟ್‌ ಮಾಡ್ತಾ ಇದ್ರು. ಆದರೆ ಇಂತಹ ರೀಲ್ಸ್‌ ರಾಜ, ರಾಣಿಯರ ಮೇಲೆ ಹದ್ದಿನ ಕಣ್ಣೀಟ್ಟಿರುವ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸರು ೪೦ಕ್ಕೂ ಹೆಚ್ಚು ಜನರಿಗೆ ನೋಟಿಸ್‌ ನೀಡಿ ಬಿಸಿ ಮುಟ್ಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಜೊತೆಗೆ ಇಂತಹ ಬೆಟ್ಟಿಂಗ್‌ ಆಪ್‌ಗಳನ್ನು ಪ್ರಮೋಟ್‌ ಮಾಡುತ್ತಿರುವ ರೀಲ್ಸ್‌ ತಾರೆಯರಿಗೆ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸರು ವಾರ್ನ್‌ ಮಾಡಿದ್ದಾರೆ. ಸೋನುಗೌಡ, ವರುಣ್‌ ಆರಾಧ್ಯ, ಶಿಲ್ಪಾಗೌಡ, ದೀಪಕ್‌ ಗೌಡ ಸೇರಿದಂತೆ 40ಕ್ಕೂ ಹೆಚ್ಚು ಜನರಿಗೆ ನೋಟೀಸ್‌ ನೀಡಿದ್ದಾರೆ.

ಇವ್ರೆಲ್ಲಾ ಇದನ್ನೇ ಬಂಡವಾಳ ಮಾಡಿಕೊಂಡು, ಹಲವಾರು ಬೆಟ್ಟಿಂಗ್‌ ಆಪ್ ಗಳನ್ನು ಪ್ರಚಾರ ಮಾಡ್ತಾ ಹಣಗಳಿಸ್ತಾ ಇದ್ರು. ಹೀಗಾಗಿ ಇವರುಗಳ ಇನ್ಸ್ಟಾಗ್ರಾಮ್‌ ಚಟುವಟಿಕೆಗಳ ಮೇಲೆ ಬೆಂಗಳೂರು ಸೈಬರ್‌ ಕ್ರೈಂ ಪೋಲೀಸರು ನಿಗಾ ಇಟ್ಟಿದ್ರು. ಇದೀಗ ಪ್ರತಿಯೊಬ್ಬರಿಗೂ ನೋಟೀಸ್‌ ನೀಡಲಾಗಿದ್ದು, ಕೆಲವರನ್ನು ವಿಚಾರಣೆಗೂ ಕೂಡ ಕರೆಯಲಾಗಿತ್ತು. ಈಗಾಗಲೇ 40ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆದಿದ್ದು. ಒಂದು ವೇಳೆ ಇದೇ ಕೆಲಸವನ್ನು ಮುಂದುವರೆಸಿದರೆ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ತೆಲಂಗಾಣದಲ್ಲಿ ಈ ರೀತಿ ಪ್ರಚಾರ ಮಾಡುತ್ತಿದ್ದ ನಟ ವಿಜಯ್‌ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್‌ ರಾಜ್‌, ನಟಿ ಶೋಭಾ ಶೆಟ್ಟಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಕಲಾವಿದರ ವಿರುದ್ದವೂ ಪೋಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಇನ್ನು ಮುಂದೆ ಬೆಟ್ಟಿಂಗ್‌ ಆಪ್‌ ಪ್ರಚಾರ ಮಾಡದಂತೆ ನೋಟಿಸ್‌ ನೀಡಿದ್ದಾರೆ. 

Author:

share
No Reviews