ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಕನ್ನಡಿಗರ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದೆ. ಇದರ ನಡುವೆ ಮಹಾರಾಷ್ಟ್ರದಲ್ಲಿ ಸರ್ಕಾರಿ ಬಸ್ಗಳ ಡ್ರೈವರ್ಗಳ ಮೇಲೆ ದೌರ್ಜನ್ಯ ನಡೆಸುವುದು ಮುಂದುವರಿದಿದ್ದು ಭಾರೀ ವಿರೋಧ ವ್ಯಕ್ತವಾಗಿದೆ.
ಕರ್ನಾಟಕದ ಬಸ್ ಕಂಡಕ್ಟರ್ನ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿರುವ ವಿಷಯ ತಣ್ಣಗಾಗುತ್ತಿಲ್ಲ. ಮಹಾರಾಷ್ಟ್ರ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸರ್ಕಾರಿ ಬಸ್ಗಳ ಸಂಚಾರವನ್ನು ಸ್ಥಗಿತ ಮಾಡಿದೆ. ಆದರೆ, ಕರ್ನಾಟಕದ ಬಸ್ ಸಂಚಾರ ಮುಂದುವರಿದಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಸಂಕಷ್ಟ ಎದುರಾಗಿದೆ.
ಸೋಮವಾರ ಕರ್ನಾಟಕದ ಬಸ್ಗಳ ಕಂಡಕ್ಟರ್ ಹಾಗೂ ಬಸ್ ಡ್ರೈವರ್ಗಳನ್ನು ನಡೆಸಿಕೊಂಡಿರುವ ವಿಧಾನಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಅನ್ನು ನಿಲ್ಲಿಸಿರುವ ಎಂಇಎಸ್ ಪುಂಡರು ಹಾಗೂ ಕೆಲವು ಮರಾಠಿಗರು, ಜೈ ಭವಾನಿ ಜೈ ಶಿವಾಜಿ ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ. ಬಸ್ ನಿಲ್ಲಿಸಿ ಬಸ್ ಡ್ರೈವರ್ ಕೆಳಗೆ ಇಳಿಯುವಂತೆ ಮಾಡಿದ್ದಾರೆ. ಆ ಮೇಲೆ ಬಸ್ ಡ್ರೈವರ್ ಮುಖ ಹಾಗೂ ತಲೆಗೆ ಕೇಸರಿ ಬಳೆದಿದ್ದಾರೆ. ಅಲ್ಲದೆ ಜೈ ಮಹಾರಾಷ್ಟ್ರ ಎಂದು ಕರ್ನಾಟಕದ ಬಸ್ಗಳ ಮೇಲೆ ಬರೆಯಲಾಗಿದೆ. ಜೈ ಮಹಾರಾಷ್ಟ್ರ ಎನ್ನುವ ಘೋಷಣೆಗಳನ್ನು ಕೂಗಲಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಎರಡೂ ರಾಜ್ಯಗಳ ಬಸ್ಗಳ ಹಾಗೂ ಕಂಡಕ್ಟರ್ ಮತ್ತು ಡ್ರೈವರ್ಗಳ ಮೇಲೆ ಮಸಿ ಹಾಗೂ ಕೇಸರಿ ಬಳಿಯುವುದು ಮುಂದುವರಿದಿದೆ. ಈ ನಡುವೆ ಕರ್ನಾಟಕ ಸರ್ಕಾರವೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರ ಆಗ್ರಹಿಸಿದೆ.