TUMAKURU: ಮುಸ್ಲಿಂ ಮಾಜಿ ಶಾಸಕನಿಂದಲೇ ಮುಸ್ಲಿಂ ಸಮಾಜದ ಆಸ್ತಿ ಕಬಳಿಕೆ?

ತುಮಕೂರು:

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯ ಮತ್ತು ರಾಷ್ಟ್ರದಲ್ಲಿ ವಕ್ಫ್‌ ಆಸ್ತಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಕ್ಫ್‌ ಆಸ್ತಿಗಳು ಕಬಳಿಕೆಯಾಗ್ತಿದೆ ಅನ್ನೋ ವಿಚಾರ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಏಕಾಏಕಿ ತಮ್ಮ ಪಹಣಿಗಳಲ್ಲಿ ವಕ್ಫ್‌ ಹೆಸರು ಎಂಟ್ರಿಯಾಗಿದ್ದನ್ನ ನೋಡಿ ಕೆಲ ರೈತರು ಕಂಗಾಲಾಗಿದ್ರು. ವಕ್ಫ್‌ ಮಂಡಳಿ ಕೆಲ ರೈತರಿಗೆ ನೋಟೀಸನ್ನ ಕೂಡ ನೀಡಿತ್ತು. ಇನ್ನು ಕೆಲವು ಕಡೆ ದೇವಸ್ಥಾನದ ಜಾಗವನ್ನೂ ಈ ವಕ್ಫ್‌ ಬೋರ್ಡ್‌ ತನ್ನದು ಅಂತಾ ಕ್ಲೇಮ್‌ ಮಾಡಿಕೊಂಡಿತ್ತು. ಇದೆಲ್ಲಾ ಒಂದು ಕಡೆ. ಆದ್ರೆ ಇತ್ತ ತುಮಕೂರಿನಲ್ಲಿ ಪ್ರಭಾವಿ ಮುಸ್ಲಿಂ ರಾಜಕಾರಣಿಯೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಕ್ಫ್‌ ಆಸ್ತಿಯನ್ನ ನುಂಗಿ ನೀರು ಕುಡಿದುಬಿಟ್ಟಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ವಕ್ಫ್‌ ಆಸ್ತಿ ಅಂದ್ರೆ ಅದು ದೇವರ ಆಸ್ತಿ ಅನ್ನೋದು ಮುಸ್ಲಿಂ ಸಮುದಾಯದವರಲ್ಲಿರೋ ನಂಬಿಕೆ. ಆದ್ರೆ ದೇವರ ಆಸ್ತಿಯನ್ನೇ ತುಮಕೂರಿನ ಪ್ರಭಾವಿ ಮುಸ್ಲಿಂ ರಾಜಕಾರಣಿಯೊಬ್ಬರು ನುಂಗಿ ನೀರು ಕುಡಿದುಬಿಟ್ಟಿದ್ದಾರಂತೆ. ಇಂತಹ ಗಂಭೀರ ಆರೋಪ ಕೇಳಿಬಂದಿರೋದು ಮತ್ಯಾರ ವಿರುದ್ಧವೂ ಅಲ್ಲ. ತುಮಕೂರಿನ ಮಾಜಿ ಶಾಸಕ, ಕಾಂಗ್ರೆಸ್‌ ಪ್ರಭಾವಿ ಮುಖಂಡ ಷಫಿ ಅಹಮದ್‌ ಮತ್ತವರ ಕುಟುಂಬದವರ ವಿರುದ್ಧ.

ಉಪ್ಪಾರಹಳ್ಳಿಯಲ್ಲಿದ್ದ ೬ ಮುಕ್ಕಾಲು ಗುಂಟೆ ಜಮೀನನ್ನ ೧೯೯೭-೯೮ರಲ್ಲಿ ಎಚ್‌ಎಂಎಸ್‌ ಮುಸ್ಲಿಂ ಹಾಸ್ಟೆಲ್‌ ಸುನ್ನಿ ಎನ್ನುವ ಹೆಸರಿನಲ್ಲಿ ವಕ್ಫ್‌ಗೆ ರಿಜಿಸ್ಟರ್‌ ಮಾಡಿಕೊಡಲಾಗಿತ್ತು. ಗೆಜೆಟ್‌ ನೊಟಿಫಿಕೇಷನ್‌ನಲ್ಲಿಯೂ ಇದು ಉಲ್ಲೇಖವಾಗಿತ್ತು. ಈ ಆಸ್ತಿಯ ಮುತುವಲ್ಲಿ ಅಂದ್ರೆ ಈ ಆಸ್ತಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಷಫಿ ಅಹಮದ್‌ ಒಡೆತನದ ಎಚ್‌ಎಂಎಸ್‌ ಸೊಸೈಟಿಗೆ ಇರುತ್ತೆ. ರಿಜಿಸ್ಟ್ರೇಷನ್‌ ಸರ್ಟಿಫಿಕೇಟ್‌ ನಲ್ಲಿ ಉಲ್ಲೇಖವಾಗಿದ್ದ ಈ ಹೆಸರನ್ನೇ ಬಳಸಿಕೊಂಡು ಈ ಆಸ್ತಿಯನ್ನೇ ನುಂಗಿಹಾಕಿದ್ದಾರಂತೆ.

೧೯೯೭-೯೮ರಲ್ಲಿ ಎಚ್‌ಎಂಎಸ್‌ ಮುಸ್ಲಿಂ ಹಾಸ್ಟೆಲ್‌ ಸುನ್ನಿ ಅನ್ನೋ ಹೆಸರಿನಲ್ಲಿದ್ದ ಈ ವಕ್ಫ್‌ ಆಸ್ತಿಯನ್ನ ಎಚ್‌ಎಂಎಸ್‌ ಎಜುಕೇಷನ್‌ ಸೊಸೈಟಿ ಚೇರ್ಮನ್‌ ಷಫಿ ಅಹಮದ್‌ ಅವರ ಹೆಸರಿಗೆ ಟ್ರಾನ್ಸ್‌ಫರ್‌ ಮಾಡಿಕೊಂಡಿದ್ದಾರಂತೆ. ಅದಾದ ಬಳಿಕ ಷಫಿ ಅಹಮದ್‌ ಅವರ ಸಹೋದರ ಅಬ್ದುಲ್‌ ಮಜೀದ್‌ ಅನ್ನೋರ ಹೆಸರಿಗೆ ಟ್ರಾನ್ಸ್‌ಫರ್‌ ಮಾಡಿಕೊಡಲಾಗಿದೆಯಂತೆ. ಆದ್ರೆ ಇಷ್ಟೆಲ್ಲಾ ಆದರೂ ಜಿಲ್ಲಾ ವಕ್ಫ್‌ ಅಧಿಕಾರಿಗಳಿಗೆ ಮಾತ್ರ ಇದ್ಯಾವುದು ಗೊತ್ತೇ ಇಲ್ವಂತೆ. ಉಪ್ಪಾರಹಳ್ಳಿಯಲ್ಲಿ ವಕ್ಫ್‌ಗೆ ಸಂಬಂಧಿಸಿದ ಹೀಗೊಂದು ಜಾಗ ಇದೆ ಅನ್ನೋದೇ ವಕ್ಫ್‌ ಅಧಿಕಾರಿಗಳಿಗೆ ಮಾಹಿತಿ ಇಲ್ವಂತೆ.

ಇನ್ನು ಈ ಬಗ್ಗೆ ವಕ್ಫ್‌ ಕಚೇರಿಗೆ ದೂರನ್ನ ಕೂಡ ನೀಡಲಾಗಿದೆ. ದೂರು ಕೊಟ್ಟು ತಿಂಗಳುಗಳೇ ಕಳೆದ್ರೂ ವಕ್ಫ್‌ ಅಧಿಕಾರಿಗಳು ಮಾತ್ರ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ವಂತೆ. ಇನ್ನು ಈ ಆಸ್ತಿಯ ಖಾತೆ ವರ್ಗಾವಣೆ ಮಾಡುವಾಗ ನೀಡಿರುವ ಫೈಲ್‌ ನಂಬರ್‌ಗೂ, ಈ ಆಸ್ತಿಗೂ ಯಾವುದೇ ಸಂಬಂಧವೇ ಇಲ್ಲ ಅನ್ನೋದು ಕೂಡ ದೂರುದಾರರ ಆರೋಪ. ಚಿಕ್ಕಪೇಟೆ ಮೂಲದ ಜಯಮ್ಮ ಅನ್ನುವವರಿಗೆ ಸಂಬಂಧಪಟ್ಟ ಫೈಲ್‌ ನಂಬರನ್ನ ಈ ವಕ್ಫ್‌ ಆಸ್ತಿಗೆ ಜೋಡಿಸಿ ಫ್ರಾಡ್‌ ಮಾಡಲಾಗಿದೆ ಅಂತಲೂ ಆರೋಪಿಸಿದ್ದಾರೆ.

ಇನ್ನು ಮುಸ್ಲಿಂ ಮುಖಂಡರು ಸಾಲು ಸಾಲು ಸಮಾವೇಶಗಳನ್ನ ಮಾಡಿ ವಕ್ಫ್‌ ಕಾಯ್ದೆ ತಿದ್ದುಪಡಿಯ ಬಗ್ಗೆ ಆತಂಕವನ್ನ ಹೊರಹಾಕ್ತಿದ್ದಾರೆ. ವಕ್ಫ್‌ ಆಸ್ತಿಯನ್ನ ಉಳಿಸಿಕೊಳ್ಳುವ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಆದ್ರೆ ಒಬ್ಬ ಮುಸ್ಲಿಂ ಸಮುದಾಯದ ಪ್ರಭಾವಿ ರಾಜಕಾರಣಿ, ಮಾಜಿ ಶಾಸಕನೇ ಹೀಗೆ ದೇವರ ಆಸ್ತಿಯನ್ನ ನುಂಗಿಬಿಟ್ರೆ, ಅದರ ರಕ್ಷಣೆಗೆ ನಿಲ್ಲೋದ್ಯಾರು ಅಂತಾ ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ನಾವು ಆಗಲೇ ಹೇಳಿದಂತೆ ವಕ್ಫ್‌ ಆಸ್ತಿ ಅಂದ್ರೆ ದೇವರ ಆಸ್ತಿ ಅನ್ನೋದು ಮುಸ್ಲಿಂ ಸಮುದಾಯದಲ್ಲಿರೋ ನಂಬಿಕೆ. ಈ ದೇವರ ಆಸ್ತಿಯನ್ನ ಸ್ವಂತದ್ದು ಮಾಡಿಕೊಳ್ಳೋಕೆ ಅಧಿಕಾರ ಕೊಟ್ಟೋರ್ಯಾರು? ಈ ಬಗ್ಗೆ ಸೂಕ್ತ ತನಿಖೆ ನಡೆದು, ವಕ್ಫ್‌ ಆಸ್ತಿ ಕಬಳಿಕೆ ಆಗಿದ್ದೇ ಹೌದಾದಲ್ಲಿ, ಇದನ್ನ ಮತ್ತೆ ವಾಪಾಸ್‌ ಪಡೆಯುವಂತಾಗಬೇಕು ಅನ್ನೋದು ಹಲವು ಮುಸ್ಲಿಂ ಸಮುದಾಯದವರ ಒತ್ತಾಯವಾಗಿದೆ.

 

Author:

...
Sub Editor

ManyaSoft Admin

Ads in Post
share
No Reviews