IPL 2025 : ಆರ್ ಸಿಬಿಗೆ ಶಾಕ್ ಮೇಲೆ ಶಾಕ್! ಅಗರ್ವಾಲ್ ಇನ್, ಪಡಿಕ್ಕಲ್ ಔಟ್!

IPL 2025 :

ಐಪಿಎಲ್‌ನ ೧೮ನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಟೂರ್ನಿ ಯುದ್ದಕ್ಕೂ ಶಾಂದಾರ್‌ ಪರ್ಫಾಮೆನ್ಸ್‌ ನೀಡುತ್ತಿರುವ ಆರ್‌ಸಿಬಿ ಈಗಾಗಲೇ ಪ್ಲೇ ಆಫ್‌ನಲ್ಲಿ ಸ್ಥಾನವನ್ನು ಕೂಡ ಖಚಿತ ಪಡಿಸಿಕೊಂಡಿದೆ. ಆದರೆ ಪ್ಲೇಆಫ್‌ ಸನಿಹದಲ್ಲಿಯೇ ಚಾಲೆಂಜರ್ಸ್‌ ಪಡೆಗೆ ಏಟಿನ ಮೇಲೆ ಏಟು ಬೀಳುತ್ತಿದ್ದು, ಇದೀಗ ಮತ್ತೊಬ್ಬ ಸ್ಟಾರ್‌ ಬ್ಯಾಟರ್‌ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ ಪಡಿಕ್ಕಲ್ ಹೊರಬಿದ್ದಿದ್ದಾರೆ. ಬಲ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಪಡಿಕ್ಕಲ್ ಅವರು ಆರ್​ಸಿಬಿ ತಂಡದ ಉಳಿದ ಪಂದ್ಯಗಳಿಂದ ಹೊರ ಗುಳಿದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರನಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್‌ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಬರೋಬ್ಬರಿ 12 ವರ್ಷಗಳ ನಂತರ ಮಯಾಂಕ್‌ ಮತ್ತೆ ಕೆಂಪಂಗಿ ಪಾಳಯಕ್ಕೆ ವಾಪಸಾಗುತ್ತಿದ್ದಾರೆ.

ಮಯಾಂಕ್ ಅಗರ್ವಾಲ್ 12 ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಆರ್‌ಸಿಬಿ ಪರ ಕಣಕ್ಕಿಳಿಯುವ ಮೂಲಕವೇ ತಮ್ಮ ಐಪಿಎಲ್‌ ಕೆರಿಯರ್ ಆರಂಭಿಸಿದರು. 2011ರಲ್ಲಿ ಮಯಾಂಕ್ ಅಗರ್ ವಾಲ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು.

ಮೊದಲ ಸೀಸನ್​ನಲ್ಲಿ 8 ಪಂದ್ಯಗಳನ್ನಾಡಿದ್ದ ಮಯಾಂಕ್ 141 ರನ್​ ಕಲೆಹಾಕಿದ್ದರು. ಹೀಗಾಗಿ ಅವರನ್ನು 2012 ರಲ್ಲೂ ತಂಡದಲ್ಲೇ ಉಳಿಸಲಾಗಿತ್ತು. ಅದರಂತೆ 2012 ರಲ್ಲಿ 16 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಅವರು ಒಟ್ಟು 216 ರನ್ ಬಾರಿಸಿದ್ದರು. ಇನ್ನು 2013ರಲ್ಲೂ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಮಯಾಂಕ್ 5 ಪಂದ್ಯಗಳಲ್ಲಿ ಕೇವಲ 67 ರನ್​ ಮಾತ್ರ ಗಳಿಸಿದ್ದರು. 2013ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪರಿಣಾಮ ಮರು ವರ್ಷವೇ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಟ್ಟಿತ್ತು. ಇದಾದ ಬಳಿಕ 2014 ರಿಂದ 2016 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್, 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್​ ತಂಡದಲ್ಲಿದ್ದ ಮಯಾಂಕ್, 2018ರಿಂದ 2022ರವರೆಗೆ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.

2023 ಹಾಗೂ 2024ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಕನ್ನಡಿಗ ಮಯಾಂಕ್‌ ಆರ್​ಸಿಬಿ ತಂಡಕ್ಕೆ ವಾಪಸಾಗಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಕನ್ನಡಿಗ ಮಯಾಂಕ್‌ ಅಗರ್ವಾಲ್ ಭರ್ಜರಿ ಸ್ವಾಗತವನ್ನು ಕೋರುತ್ತಿದ್ದರೆ, ಇತ್ತ ಆರ್‌ಸಿಬಿ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ ಕೂಡ ವೆಲ್‌ಕಮ್‌ ಪೋಸ್ಟ್‌ ಹಾಕಿ ಮಯಾಂಕ್‌ ಅವರನ್ನು ಸ್ವಾಗತಿಸಿದೆ.

Author:

...
Sushmitha N

Copy Editor

prajashakthi tv

share
No Reviews