IPL 2025 :
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಕ್ರಿಕೆಟ್ ಹಬ್ಬವು ಈಗಾಗಲೇ ಜೋರಾಗಿ ನಡೆಯುತ್ತಿದ್ದು, ಪ್ರತಿ ದಿನವೂ ರೋಚಕ ಪೈಪೋಟಿಗಳಿಗೆ ಸಾಕ್ಷಿಯಾಗುತ್ತಿದೆ. ಆದರೆ ಈಗ ಟೂರ್ನಿಯ ವೇಳಾಪಟ್ಟಿಯ ಕುರಿತಾಗಿ ತೀವ್ರ ಚರ್ಚೆ ಶುರುವಾಗಿದೆ. ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿರುವ ಬ್ಯಾಕ್ ಟು ಬ್ಯಾಕ್ ಪಂದ್ಯಗಳು ಹೆಚ್ಚಿನ ಗಮನ ಸೆಳೆದಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೂಪಿಸಲಾಗಿರುವ ವೇಳಾಪಟ್ಟಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ನ 34ನೇ ಪಂದ್ಯದಲ್ಲಿ RCB ಮತ್ತು PBKS ತಂಡಗಳು ಏಪ್ರಿಲ್ 18ರಂದು ಅಂದರೆ ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ವಿಶೇಷವೆನೆಂದರೆ ಈ ಪಂದ್ಯದ ಬಳಿಕ ಏಪ್ರಿಲ್ 20 ರಂದು ಮತ್ತೆ ಇದೇ ಎರಡು ತಂಡಗಳ ನಡುವೆ ಪಂದ್ಯ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯವು ಏಪ್ರಿಲ್ 18 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದರೆ, ಏಪ್ರಿಲ್ 20 ರಂದು ಉಭಯ ತಂಡಗಳು ಮತ್ತೊಮ್ಮೆ ಚಂಡೀಗಢ್ನಲ್ಲಿ ಕಣಕ್ಕಿಳಿಯಲಿವೆ. ಒಂದೇ ತಂಡದ ವಿರುದ್ಧ ಸತತ ಪಂದ್ಯಗಳನ್ನು ಆಯೋಜಿಸಿದರೂ, ಉಭಯ ತಂಡಗಳಿಗೆ ಒಂದು ದಿನದ ಬಿಡುವು ಮಾತ್ರ ನೀಡಲಾಗಿದೆ. ಏಪ್ರಿಲ್ 18 ರಂದು ರಾತ್ರಿ ಪಂದ್ಯ ಮುಗಿದ ಬಳಿಕ ಏಪ್ರಿಲ್ 19 ರಂದು ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಚಂಡೀಗಢ್ನತ್ತ ಪ್ರಯಾಣ ಬೆಳೆಸಬೇಕಿದೆ. ಅಲ್ಲದೆ ಮರುದಿನ ಮಧ್ಯಾಹ್ನದೊಳಗೆ ಮತ್ತೆ ಪಂದ್ಯವಾಡಲು ಸಜ್ಜಾಗಬೇಕಿದೆ.
ಇನ್ನು ಕ್ರಿಕೆಟ್ ಲೋಕದಲ್ಲಿ ಸಾಮಾನ್ಯವಾಗಿ ಪಂದ್ಯಗಳ ನಡುವೆ ಕನಿಷ್ಠ ಎರಡು ದಿನಗಳ ವಿಶ್ರಾಂತಿ ನೀಡಲಾಗುತ್ತದೆ. ಆದರೆ ಈ ಬಾರಿ ಮಾತ್ರ, ಐಪಿಎಲ್ ಮ್ಯಾನೇಜ್ಮೆಂಟ್ ಜಾರಿಗೊಳಿಸಿರುವ ಈ ತರಹದ ಗಡಿಬಿಡಿ ವೇಳಾಪಟ್ಟಿಯು, ಆಟಗಾರರ ಆರೋಗ್ಯ ಹಾಗೂ ಪ್ರದರ್ಶನದ ಪರಿಣಾಮ ಬೀರಬಹುದು ಎನ್ನುವ ಅಭಿಪ್ರಾಯಗಳು ಮುಂದಾಗಿವೆ. ಒಟ್ಟಿನಲ್ಲಿ ಐಪಿಎಲ್ ಮ್ಯಾನೇಜ್ಮೆಂಟ್ ರೂಪಿಸಿರುವ ಈ ವೇಳಾಪಟ್ಟಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಆಟಗಾರರನ್ನು ಸಂಕಷ್ಟಕ್ಕೆ ಸಿಲುಕಿದೆ.