ದುಬೈ : ಯುಎಇನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ನ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಕರ್ನಾಟಕದ ಅಥ್ಲೀಟ್ ಕರಿಶ್ಮಾ ಅವರು ಭರ್ಜರಿ ಪ್ರದರ್ಶನ ನೀಡಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ದುಬೈನಲ್ಲಿ ನಡೆದ ವ್ಯುಮೆನ್ಸ್ ಗಾಲಾ ಅಥ್ಲೆಟಿಕ್ಸ್ ಕೂಟದಲ್ಲಿ ಕರಿಶ್ಮಾ ಅವರು 53.33 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು, ಈ ಸಾಧನೆಯೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಪ್ರತಿಭೆಯನ್ನು ಮತ್ತೊಮ್ಮ ಸಾಧನೆ ಗೈದಿದ್ದಾರೆ.
ಇನ್ನು ಇದೇ ಕೂಟದಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತೀಯ ಆಟಗಾರ್ತಿಯರು ಮತ್ತೊಂದು ವಿಜಯ ಬಾಚಿಕೊಂಡರು. ಆ್ಯನ್ಸಿ ಸೋಜನ್ 6.54 ಮೀಟರ್ ಜಿಗಿತದೊಂದಿಗೆ ಚಿನ್ನದ ಪದಕವನ್ನು ಗೆದ್ದರೆ, ಶೈಲಿ ಸಿಂಗ್ 6.48 ಮೀಟರ್ ದೂರ ಜಿಗಿದು ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಭಾರತದ ಮಹಿಳಾ ಅಥ್ಲೀಟ್ಗಳ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ಇಲಾಖೆಯವರು ಅಭಿನಂದನೆ ಸಲ್ಲಿಸುತ್ತಿದ್ದಾರೆ.