HEALTH TIPS: ಬಿರು ಬೇಸಿಗೆಗೆ ಮನೆಯಲ್ಲಿಯೇ ತಯಾರಿಸಿ ಎನರ್ಜಿ ಡ್ರಿಂಕ್‌

ಬೇಸಿಗೆಯಲ್ಲಿ ಬಾಯಾರಿಕೆ ನೀಗಲು ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಲಿದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ. ದೇಹ ತಂಪಾಗಿರಬೇಕು,ಬಾಯಾರಿಕೆ ನೀಗಬೇಕು ಜೊತೆಗೆ ಆರೋಗ್ಯವೂ ಚೆನ್ನಾಗಿರಬೇಕಂದ್ರೆ ಮನೆಯಲ್ಲೇ ಜ್ಯೂಸ್ ಸಿದ್ಧಪಡಿಸೋದು ಒಳ್ಳೆಯದು.ಮನೆಯಲ್ಲಿ ತಯಾರಿಸ್ಬಹುದಾದ ಅಂಥ ಮೂರು ಜ್ಯೂಸ್ಗಳ ಮಾಹಿತಿ ಇಲ್ಲಿದೆ.

*ಹೆಸರುಕಾಳು ಜ್ಯೂಸ್
ಇದು ಭಾರತದ ಪುರಾತನ ಎನರ್ಜಿ ಡ್ರಿಂಕ್ಸ್ಗಳಲ್ಲೊಂದು.ನಮ್ಮ ಪೂರ್ವಜರು ಬಳಸುತ್ತಿದ್ದ ಈ ಜ್ಯೂಸ್ನಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದ್ದು,ಕಾರ್ಬೋಹೈಡ್ರೆಟ್ಸ್ ಕಡಿಮೆಯಿದೆ.ಹೀಗಾಗಿ ಪ್ಯಾಕೇಟ್ಗಳಲ್ಲಿ ಸಿಗೋ ಸಿದ್ಧ ಪ್ರೋಟೀನ್ ಡ್ರಿಂಕ್ಸ್ಗಳಿಗಿಂತ ಇದು ಆರೋಗ್ಯಕ್ಕೆ ಉತ್ತಮ.ಇನ್ನು ಇದ್ರಲ್ಲಿ ವಿಟಮಿನ್ ಬಿ ಹೇರಳವಾಗಿದ್ದು,ಕಾರ್ಬೋಹೈಡ್ರೇಟ್ಸ್ ಅನ್ನು ಗ್ಲುಕೋಸ್ ಆಗಿ ವಿಭಜಿಸೋ ಮೂಲಕ ದೇಹಕ್ಕೆ ಅಗತ್ಯ ಶಕ್ತಿಯನ್ನು ಪೂರೈಸುತ್ತದೆ. ದೇಹವನ್ನು ತಂಪಾಗಿಸೋ ಗುಣವನ್ನು ಇದು ಹೊಂದಿರೋ ಕಾರಣ ಬೇಸಿಗೆಗೆ ಹೇಳಿ ಮಾಡಿಸಿದ ಜ್ಯೂಸ್.

ಬೇಕಾಗುವ ಸಾಮಗ್ರಿಗಳು:
ಹೆಸರುಕಾಳು- 1 ಕಪ್
ಬೆಲ್ಲ -3/4 ಕಪ್
ಕಾಯಿತುರಿ- ಸ್ವಲ್ಪ
ಏಲಕ್ಕಿ- 2

ಮಾಡುವವಿಧಾನ:
ಹೆಸರುಕಾಳನ್ನು ಚೆನ್ನಾಗಿ ಹುರಿದುಕೊಳ್ಳಿ. ಆ ಬಳಿಕ ನೀರಿನಲ್ಲಿ 2-3 ಸಲ ತೊಳೆಯಿರಿ. ಬಳಿಕ ತೆಂಗಿನ ತುರಿ, ಬೆಲ್ಲ, ಏಲಕ್ಕಿ ಬೀಜ  ಹಾಗೂ ಸ್ವಲ್ಪ ನೀರಿನೊಂದಿಗೆ ಹೆಸರುಕಾಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಜಾರಿನಿಂದ ಪಾತ್ರೆಗೆ ವರ್ಗಾಯಿಸಿದ ಬಳಿಕ ಅಗತ್ಯಕ್ಕೆ ತಕ್ಕಷ್ಟು ಅಂದ್ರೆ ಜ್ಯೂಸ್ನಂತೆ ಕುಡಿಯಲು ಸಾಧ್ಯವಾಗೋವಷ್ಟು ನೀರು ಸೇರಿಸಿ. ಸ್ವಲ್ಪ ಹೊತ್ತು ಫ್ರಿಜ್ನಲ್ಲಿಟ್ಟು ಅಥವಾ ಐಸ್ಕ್ಯೂಬ್ ಸೇರಿಸಿ ಸರ್ವ್ ಮಾಡಿ. 

*ರಾಗಿ ಜ್ಯೂಸ್
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸೋ ಪದಾರ್ಥಗಳಲ್ಲಿ ರಾಗಿಯೂ ಸೇರಿದೆ. ರಾಗಿಯಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸೋ ಗುಣವಿದೆ. ರಾಗಿಯಲ್ಲಿರೋ ಪೌಷ್ಟಿಕಾಂಶಗಳ ಬಗ್ಗೆಯಂತೂ ಎಲ್ಲರಿಗೂ ತಿಳಿದೇ ಇದೆ. ಕಾರ್ಬೋಹೈಡ್ರೇಟ್ಸ್, ಫ್ಯಾಟ್ಸ್, ಪ್ರೋಟೀನ್, ಫೈಬರ್ಸ್ ಜೊತೆ ವಿಟಮಿನ್ ಸಿ, ಇ, ಬಿ ಕಾಂಪ್ಲೆಕ್ಸ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಷಿಯಂ ಹಾಗೂ ಫಾಸ್ಪರಸ್ನಂತಹ ಮಿನರಲ್ಸ್ ಕೂಡ ಇವೆ. ಒಂದೇ ಪದದಲ್ಲಿ ಹೇಳೋದಾದ್ರೆ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಸೇವಿಸಬಹುದಾದ ಪರಿಪೂರ್ಣ ಧಾನ್ಯ ರಾಗಿ. ರಕ್ತಹೀನತೆಯನ್ನು ದೂರ ಮಾಡೋ ಜೊತೆ ಮೂಳೆಗಳನ್ನು ಸದೃಢಪಡಿಸೋ ಕಾರ್ಯವನ್ನು ರಾಗಿ ಮಾಡುತ್ತೆ. ಮಕ್ಕಳು, ಗರ್ಭಿಣಿಯರು ಹಾಗೂ ಎದೆಹಾಲುಣಿಸೋ ತಾಯಂದಿರಿಗೆ ಇದೊಂದು ಅತ್ಯುತ್ತಮ ಆಹಾರ. ಬೇಸಿಗೆಯಲ್ಲಿ ಮನೆಯಿಂದ ಹೊರಹೋಗಿ ಸುಸ್ತಾಗಿ ಬಂದವರು ರಾಗಿ ಜ್ಯೂಸ್ ಕುಡಿದ್ರೆ ಬಾಯಾರಿಕೆ ಇಂಗೋ ಜೊತೆ ದೇಹಕ್ಕೆ ಅಗತ್ಯ ಎನರ್ಜಿಯೂ ಸಿಗುತ್ತೆ.

ಬೇಕಾಗುವ ಸಾಮಗ್ರಿಗಳು:
ರಾಗಿ –1 ಕಪ್
ಬಾದಾಮಿ- 10-15
ಬೆಲ್ಲದ ಪುಡಿ-1 ಕಪ್

 

ಮಾಡುವವಿಧಾನ:
ರಾಗಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಹಾಕಿ. ಬಾದಾಮಿಯನ್ನು ಕೂಡ 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿಡಬೇಕು. ಬಳಿಕ ರಾಗಿಯನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಬಾದಾಮಿ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.ತೆಳುವಾದ ಬಟ್ಟೆ ಅಥವಾ ಜರಡಿ ಸಹಾಯದಿಂದ ರುಬ್ಬಿಕೊಂಡ ಮಿಶ್ರಣದಿಂದ ಪಾತ್ರೆಗೆ ಹಾಲು ಹಿಂಡಿ. ಈಗ ಆ ಮಿಶ್ರಣವನ್ನು ಪುನಃ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮತ್ತೆ ಹಾಲು ಹಿಂಡಿ. ರಾಗಿ ಹಾಲಿಗೆ ಬೆಲ್ಲದ ಪುಡಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ ಸ್ವಲ್ಪ ಹೊತ್ತು ಫ್ರಿಜ್ನಲ್ಲಿಡಿ. ಆ ಬಳಿಕ ಗ್ಲಾಸ್ಗೆ ಸುರಿದು ಮನೆಮಂದಿಗೆ ಸರ್ವ್ ಮಾಡಿ.

 

Author:

...
Sub Editor

ManyaSoft Admin

share
No Reviews