ಹಾಸನ ನಗರದಲ್ಲಿ ನೆಲೆಸಿರುವ ಶ್ರೀ ಹಾಸನಾಂಬೆಯ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದಲ್ಲಿ ಸ್ಥಾಪಿತ ವಾಗಿರುವ ಈ ದೇವಾಲಯವು ಇತರ ದೇವಾನುದೇವತೆಗಳ ಕೆತ್ತನೆಯಲ್ಲಿ ಹಾಸನಾಂಬ ದೇವಿಯು ಹುತ್ತದಲ್ಲಿ ನೆಲೆಸಿರುವ ದೇವಾಲಯವಾಗಿದೆ. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಆನಂತರದಲ್ಲಿ ಹಾಸನ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದೆ.
ಸಪ್ತ ಮಾತೃಕೆಯರು ವಾರಣಾಸಿಯಿಂದ (ಕಾಶಿ) ದಕ್ಷಿಣಕ್ಕೆ ವಾಯುವಿಹಾರಾರ್ಥವಾಗಿ ಬಂದರೆಂದೂ, ಆ ಸಪ್ತ ಮಾತೃಕೆಯರೆಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ. ಈ ಸಪ್ತ ಮಾತೃಕೆಯರಲ್ಲಿ ವೈಷ್ಣವಿ ಮಹೇಶ್ವರಿ ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆಂದೂ ಪ್ರತೀತಿಯಂತೆ ತಿಳಿದುಬಂದಿದೆ.
ವರ್ಷಕೊಮ್ಮೆ ದೇವಿಯರ ದರ್ಶನವಿದ್ದು ಹಾಸನಾಂಬೆ ದೇವಿಯನ್ನು ಭಕ್ತರು ಎಲ್ಲಾ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೊಂದು ಸಾರಿ ಆಶ್ವಯುಜ ಮಾಸ ಪೂರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು, ಪುನಃ ಒಂದು ವರ್ಷದ ಕಾಲ ದೇವಿಯರ ದರ್ಶನ ಸಿಗುವುದಿಲ್ಲ. ಹಾಸನಾಂಬಾ ದೇವಿಯ ವಿಶೇಷವೆಂದರೆ ನಂಬಿದ ಭಕ್ತರ ಹರಕೆಗಳನ್ನು ತೀರಿಸುವುದು ಹಾಗೂ ಅವರ ಜೀವನದಲ್ಲಿ ಹೊಸಬೆಳಕು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವುದು.
ಹಾಸನಾಂಬ ದೇವಿಯ ಬಾಗಿಲು ತೆಗೆಯುವ ಸಮಯ ಬಂತೆಂದರೆ ಜಿಲ್ಲೆಯ ಎಲ್ಲಾ ಮೂಲೆ ಮೂಲೆಗಳಿಂದ ಭಕ್ತಾಧಿಗಳೂ ದೇವಿಯ ದರ್ಶನಕ್ಕೋಸ್ಕರ ಸಾಲುಸಾಲಾಗಿ ನಿಂತು ದರ್ಶನ ಮಾಡುತ್ತಾರೆ. ಬಾಗಿಲು ತೆಗೆಯುವ ದಿವಸ ಹಾಸನದಲ್ಲಿರುವ ಎಲ್ಲಾ ತಳವಾರ ಮನೆತನದವರು ದೇವಿಯ ಗರ್ಭಗುಡಿಯ ಎದುರಿಗೆ ಬಾಳೆಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಭಜಿಸುತ್ತಾ ಬಾಳೆಕಂದನ್ನು ಕತ್ತರಿಸಿದ ನಂತರವೇ ದೇವಿಯ ಬಾಗಿಲನ್ನು ತೆಗೆಯುವ ಪ್ರತೀತಿ/ಸಂಪ್ರದಾಯವು ಮೊದಲಿನಿಂದಲೂ ರೂಢಿಯಲ್ಲಿದೆ.
ಬಲಿಪಾಡ್ಯಮಿಯ ಮಾರನೇ ದಿನ ಪೂಜೆ ಸಲ್ಲಿಸಿ ದೀಪ ಹಚ್ಚಿ ಬಾಗಿಲು ಮುಚ್ಚಿದರೆ ಮತ್ತೆ ದೇಗುಲ ತೆರೆಯುವುದು ವರ್ಷದ ಬಳಿಕ. ಆದರೆ ವರ್ಷದ ಬಳಿಕ ಬಾಗಿಲು ತೆರೆದರೂ ಹಿಂದಿನ ವರ್ಷ ಹಚ್ಚಿಟ್ಟ ದೀಪ ಆರಿರುವುದಿಲ್ಲ. ದೇವರ ಮುಡಿಗಿಟ್ಟ ಹೂ ಬಾಡಿರುವುದಿಲ್ಲ.
ಪ್ರತಿ ವರ್ಷ ಆಶ್ವಾಯುಜ ಮಾಸದ ಕೃಷ್ಣಾಪಕ್ಷದ ಪ್ರಥಮ ದ್ವಿತೀಯ ಹೊರತುಪಡಿಸಿ ಬರುವ ಗುರುವಾರದಂದು ದೇವಾಲಯದ ಗರ್ಭಗುಡಿಯ ಬಾಗಿಲು ತೆಗೆದು (ದೀಪಾವಳಿ ಕಾಲಗಳಲ್ಲಿ) ಸಂಪ್ರದಾಯಿಕ ವಿಧಿ ವಿಧಾನದಂತೆ ಕನಿಷ್ಠ 9 ದಿನ ಗರಿಷ್ಠ 15 ದಿನಗಳವರೆಗೆ ದರ್ಶನ ನಂತರ ಯಮದ್ವೀತಿಯ ದಿನದಂದು ಬಾಗಿಲು ಮುಚ್ಚಿದ ನಂತರ ಇತರೆ ದಿನಗಳಲ್ಲಿ ದೇವಾಲಯದಲ್ಲಿರುವ ದೇವರ ಪಾದಗಳು ಹಾಗೂ ಗರ್ಭಗುಡಿ ದ್ವಾರಕ್ಕೆ ನಿತ್ಯ ಪೂಜೆ ಸಪ್ತಾಹ ಪೂಜೆ ಮತ್ತು ಮಾಸಿಕ ಪೂಜೆಗಳು ನಡೆಯುವುದು.
ಇದೊಂದು ದಂತಕಥೆ ಅರ್ಚಕರು ಮತ್ತು ಭಕ್ತರು ಹಿಂದಿನಿಂದಲೂ ಸ್ಥಳ ಮಹಾತ್ಮೆಯನ್ನು ಹೇಳಿಕೊಂಡು ಬರುತ್ತಿರುವ ಪ್ರತೀತಿ ಆಗಿದೆ ಇದಕ್ಕೆ ಯಾವುದೇ ಶಾಸನಗಳಲ್ಲಿ ಇತಿಹಾಸ ಪುರಾಣಗಳಲ್ಲಿ ಉಲ್ಲೇಖ ಇರುವುದಿಲ್ಲ, ಅರ್ಚಕರ ಕುಟುಂಬದ ಪೂರ್ವಿಕರು ಒಬ್ಬರಿಂದ ಒಬ್ಬರಿಗೆ ಹೇಳಿಕೊಂಡು ನಡೆದುಕೊಂಡು ಬರುತ್ತಿರುವುದೇ ವಿಶೇಷವಾಗಿದೆ.