ಇತ್ತೀಚೆಗೆ ಹೃದ್ರೋಗವು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಜಾಗರೂಕರಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದ್ರೋಗದಿಂದಾಗಿ ಸಾಯುತ್ತಿದ್ದಾರೆ. ವಯಸ್ಕರು, ಯುವಕರು ಎನ್ನದೇ ಹೆಚ್ಚಿನವರು ಹೃದಯದ ಖಾಯಿಲೆಯಿಂದ ಬಳಲುತ್ತಿದ್ದಾರೆ. ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವ ಅಥವಾ ಹದಗೆಡಿಸುವ ಒಂದು ಪ್ರಮುಖ ಅಂಶವೆಂದರೆ ಅದು ನಿಮ್ಮ ಆಹಾರ. ಆರೋಗ್ಯಕರ ಆಹಾರವು ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಂತಹ ಅಪಾಯಕಾರಿ ಅಂಶಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಜಂಕ್ ಫುಡ್ ತೊಡೆದುಹಾಕುವುದರ ಜೊತೆಗೆ ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆರೋಗ್ಯಕರ ಆಹಾರಗಳು ಇಲ್ಲಿವೆ.
ಅಗಸೆಬೀಜಗಳು : ಪ್ರತಿದಿನ ಒಂದು ಚಮಚ ಅಗಸೆಬೀಜವನ್ನು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾದ ಹೆಚ್ಚಿನ ಮಟ್ಟವನ್ನು ತಲುಪದಂತೆ ತಡೆಯುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್, US ನಲ್ಲಿ ಪ್ರಕಟವಾದ ಅಧ್ಯಯನವು, ದಿನಕ್ಕೆ ಸುಮಾರು ನಾಲ್ಕು ಟೇಬಲ್ಸ್ಪೂನ್ ಅಗಸೆಬೀಜಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಸಂಶೋಧನಾ ಪ್ರಬಂಧಗಳ ಪ್ರಕಾರ, ಅಗಸೆಬೀಜಗಳಲ್ಲಿ ಕಂಡುಬರುವ ಆಲ್ಫಾ-ಲಿನೋಲೆನಿಕ್ ಆಮ್ಲವು ಹೃದ್ರೋಗ ಹೊಂದಿರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಸಂಪೂರ್ಣ ಧಾನ್ಯಗಳು : ಬಿಳಿ ಬ್ರೆಡ್, ಬಿಳಿ ಪಾಸ್ಟಾ ಇತ್ಯಾದಿಗಳ ಬದಲಿಗೆ ನಿಮ್ಮ ಆಹಾರದಲ್ಲಿ ಸಂಪೂರ್ಣ ಧಾನ್ಯಗಳನ್ನು ಬಳಸಿ. ಧಾನ್ಯಗಳು ಫೈಬರ್, ಜೀವಸತ್ವಗಳು, ಖನಿಜಗಳಲ್ಲಿ ಸಮೃದ್ಧವಾಗಿವೆ ಮತ್ತು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಸೋಯಾ ಆಹಾರಗಳು : ಸೋಯಾ ಆಹಾರಗಳಾದ ಟೋಫು, ಟೆಂಪೆ, ಎಡಮೇಮ್ ಮತ್ತು ಸೋಯಾ ಹಾಲು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರಗಳಾಗಿವೆ. ಇವುಗಳು ಕಡಿಮೆ ಮಟ್ಟದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಸಹಕಾರಿಯಾಗಿದೆ. ಮಾಂಸ, ಕೊಬ್ಬಿನ ಕೆನೆ ಮತ್ತು ಡೈರಿ ಉತ್ಪನ್ನಗಳಂತಹ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರಗಳ ಬದಲಿಗೆ ಸೋಯಾ ಉತ್ಪನ್ನಗಳು ಉತ್ತಮ ಆಯ್ಕೆಯಾಗಿದೆ ಎಂದು ಹಾರ್ಟ್ ಯುಕೆ ಹೇಳುತ್ತದೆ.
ಡ್ರೈ ಫ್ರೂಟ್ಸ್‌ಗಳು : ಡ್ರೈ ಫ್ರೂಟ್ಸ್‌ಗಳು ಅಪರ್ಯಾಪ್ತ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಕಡಿಮೆ ಇದೆ. ಹಾರ್ಟ್ ಯುಕೆ ಪ್ರಕಾರ, ಇದು ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಡ್ರೈ ಫ್ರೂಟ್ಸ್‌ಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಇದು ನಿಮ್ಮ ರಕ್ತಪ್ರವಾಹಕ್ಕೆ ಹೀರಲ್ಪಡುವ ಕೆಲವು ಕೊಲೆಸ್ಟ್ರಾಲ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಹೃದಯಕ್ಕೆ ಉತ್ತಮವಾದ ಆರೋಗ್ಯಕರ ಡ್ರೈ ಫ್ರೂಟ್ಸ್‌ಗಳಲ್ಲಿ ಬಾದಾಮಿ, ಕಡಲೆಕಾಯಿ, ವಾಲ್ನಟ್ಸ್ ಗಳೂ ಸೇರಿವೆ.
ಬೀಟ್ರೂಟ್ ಜ್ಯೂಸ್ : ಬಿಟ್ರೂಟ್ ರಸವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಇದು ನೈಟ್ರೇಟ್ ನಲ್ಲಿ ಸಮೃದ್ಧವಾಗಿದೆ, ಇದು ಅಧಿಕ ಬಿಪಿ ಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ಸಂಶೋಧನೆಯ ಪ್ರಕಾರ, ನಿಯಮಿತ ಒಂದು ಗ್ಲಾಸ್ ಬೀಟ್‌ರೂಟ್ ಜ್ಯೂಸ್ ಕುಡಿಯುವುದು ರಕ್ತನಾಳಗಳಲ್ಲಿನ ಉರಿಯೂತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.