ಹಾವೇರಿ : 2024ರ ಜನವರಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳು ಜಾಮೀನು ಪಡೆದ ತಕ್ಷಣವೇ ರೋಡ್ ಶೋ ನಡೆಸಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಶರತ್ತು ಬದ್ಧ ಜಾಮೀನಿನ ಉಲ್ಲಂಘನೆ ಆರೋಪದಲ್ಲಿ ಪೊಲೀಸರು ಮತ್ತೆ ಇವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಎ1 ಅಪ್ತಾಬ್ ಚಂದನಕಟ್ಟಿ, ಎ2 ಮದರ್ ಸಾಬ್ ಮಂಡಕ್ಕಿ, ಎ3 ಸಮಿವುಲ್ಲಾ ಲಾಲನವರ, ಎ4 ಮಹಮದ್ ಸಾದಿಕ್ ಅಗಸಿಮನಿ, ಎ8 ಶೊಯಿಬ್ ಮುಲ್ಲಾ, ಎ11 ತೌಸಿಪ್ ಚೋಟಿ ಮತ್ತು ಎ13 ರಿಯಾಜ್ ಸಾವಿಕೇರಿಗೆ ಎಂಬುವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಆದರೆ, ಜೈಲಿನಿಂದ ಬಿಡುಗಡೆಯಾದ ತಕ್ಷಣ ಈ ಮಂದಿ ಐದು ಕಾರುಗಳಲ್ಲಿ 20ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಅಕ್ಕಿ ಆಲೂರು ಪಟ್ಟಣದವರೆಗೆ ಮೆರವಣಿಗೆ ಮಾಡಿದರು.
2024ರ ಜನವರಿ 8ರಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, 19 ಆರೋಪಿಗಳ ಪೈಕಿ 12 ಮಂದಿ ಈಗಾಗಲೇ ಜಾಮೀನು ಪಡೆದಿದ್ದರು. ಮುಖ್ಯ ಆರೋಪಿಗಳ ಜಾಮೀನು ಅರ್ಜಿ ಹಲವಾರು ಬಾರಿ ತಿರಸ್ಕೃತವಾದರೂ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಇದೀಗ ಅವರಿಗೆ ಜಾಮೀನು ಸಿಕ್ಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೋಡ್ ಶೋ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಂದ ಇಂತಹ ರೀತಿಯ ಪ್ರಚೋದನಾತ್ಮಕ ವರ್ತನೆ ವಿರೋಧವಾಗಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಹಾವೇರಿ ಪೊಲೀಸರೂ ಕೂಡ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರಾಗಿ ಹೊರ ಬಂದ ಕೂಡಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಬೆಳವಣಿಗೆಯು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ.