ಹಾವೇರಿ :
ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಅಪಘಾತದಲ್ಲಿ ಹರಿಹರ ನಿವಾಸಿ 27 ವರ್ಷದ ಫರಾನ್, ರಾಣಿಬೆನ್ನೂರಿನ ಸಿದ್ದೇಶ್ವರ ನಗರದ ನಿವಾಸಿ 16 ವರ್ಷದ ಉಮ್ಮಿಶಿಪಾ, ಗೋವಾದ ಪಣಜಿ ನಿವಾಸಿ 20 ವರ್ಷದ ಅಲಿಷಾ, 17 ವರ್ಷದ ಫೂಲಖಾನ್ ಹಾಗೂ ಫಿರೋಜ್ (42) ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ. ಆದರೆ ಇನ್ನೊಬ್ಬರ ಮೃತದೇಹದ ಗುರುತು ಪತ್ತೆಯಾಗಿಲ್ಲ.
ಇನ್ನು ತಷ್ಕಿನ್ ಹಾಗೂ ಮೆಹಕ್ ಎಂಬ ಇಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗೋವಾಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ವೇಗವಾಗಿ ಬಂದು ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಮೃತದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು ಆಸ್ಪತ್ರೆಯ ಶವಗಾರದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಎಸ್‌ಪಿ ಅಂಶುಕುಮಾರ್ ಹಾಗೂ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.