ಗುಬ್ಬಿ:
ಐತಿಹಾಸಿಕ ಪ್ರಸಿದ್ಧ ಪಾರ್ವತಿ ಸಮೇತ ಅಮರಗೊಂಡ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಮಧ್ಯಾಹ್ನ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಗುಬ್ಬಿ ಪಟ್ಟಣದ ಜವಳಿಪೇಟೆಯಲ್ಲಿರುವ ಪುರಾಣ ಪ್ರಸಿದ್ಧ ಅಮರಗೊಂಡ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹಾ ಶಿವರಾತ್ರಿ ಜಾಗರಣೆ ನಂತರ ನಡೆಯುವ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಶಿವರಾತ್ರಿ ದಿನದಂದು ಬೆಳಿಗ್ಗೆಯಿಂದ ನಡೆದ ಅನೇಕ ಪೂಜಾ ವಿಧಿವಿಧಾನ ಇಡೀ ರಾತ್ರಿ ಏಕಾದಶಿ ರುದ್ರ ಹೋಮ ನಡೆಯಿತು. ಗುರುವಾರ ಬೆಳಿಗ್ಗೆ ಪೂರ್ಣಾಹುತಿ ನಡೆದು ನಂತರ ಸ್ವಾಮಿಯನ್ನು ಮೆರವಣಿಗೆಯಲ್ಲಿ ಕರೆ ತಂದು ರಥೋತ್ಸವ ನಡೆಸಲಾಯಿತು. ಬಿರು ಬಿಸಿಲಿನ ಝಳಕ್ಕೆ ಬಳಲಿದ ಭಕ್ತರಿಗೆ ಪಾನಕ ಮಜ್ಜಿಗೆ ಫಲಾಹಾರ ಪ್ರಸಾದವನ್ನು ಯುವಕರು ಆಯೋಜಿಸಿದ್ದರು. ವೀರಶೈವ ಸಮಾಜದ ಮುಖಂಡರು, ಯುವಕರು ಒಗ್ಗೂಡಿ ಧಾರ್ಮಿಕ ಕಾರ್ಯಕ್ರಮ ಜೊತೆಗೆ ಮಹಾ ದಾಸೋಹ ಕೂಡಾ ನಡೆಸಿಕೊಟ್ಟರು. ರಥೋತ್ಸವಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತರು ತಮ್ಮ ಹರಕೆ ಕಟ್ಟಿಕೊಂಡರು.