ಗುಬ್ಬಿ : ಜಮೀನು ವಿಚಾರಕ್ಕೆ ತನ್ನ ದೊಡ್ಡಪ್ಪನನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಗುಬ್ಬಿ ತಾಲ್ಲೂಕಿನ ಸಿ ಎಸ್ ಪುರದ ಅಂಕಳಕೊಪ್ಪ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಕರೀಂ ಸಾಬ್ ಎಂಬುವರು ಮೃತ ದುರ್ದೈವಿಯಾಗಿದ್ದಾರೆ. 25 ವರ್ಷದ ಆಫ್ರಿದ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.
ಆರೋಪಿ ತಾಯಿ ಬೇಬಿ ಜಾನ್ ಎಂಬುವರು ಕೊಲೆಯಾದ ಕರೀಮ್ ಸಾಬ್ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದರು. ಈ ವೇಳೆ ಜಮೀನು ನನಗೆ ಸೇರಿದ್ದು, ಯಾಕೆ ಇಲ್ಲಿ ಮೇಯಿಸುತ್ತಿದ್ದಿಯ ಎಂದು ಕರೀಂ ಸಾಬ್ ಕೇಳಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವಿಚಾರವನ್ನು ಬೇಬಿ ಜಾನ್ ಎಂಬಾಕೆ ಮಗನಾದ ಅಫ್ರಿದ್ ಗೆ ಪೋನ್ ಮಾಡಿ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಅಫ್ರಿದ್ ರಸ್ತೆಯಲ್ಲಿ ಬರುತ್ತಿದ್ದ ದೊಡ್ಡಪ್ಪ ಕರೀಮ್ ಸಾಬ್ ಎಂಬಾತನನ್ನು ಅಡ್ಡಗಟ್ಟಿ ಸ್ಥಳದಲ್ಲಿಯೇ ಕೊಲೆಗೈದ ಎನ್ನಲಾಗಿದೆ. ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮಸಾಲೆ ಜಯರಾಮ್ ಅವರ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದೆ,
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಸೇರಿದಂತೆ ಶಿರಾ ಡಿವೈಎಸ್ಪಿ ಶೇಖರ್, ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಅಫ್ರಿದ್ ಸೇರಿದಂತೆ ಅಶ್ವಕ್, ಗೌಸ್ ಪೀರ್, ಬೇಬಿ ಜಾನ್, ಎಂಬ ನಾಲ್ಕು ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.