ಗುಬ್ಬಿ :
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಗ್ರಾಮದಲ್ಲಿ ಕೆಂಪಮ್ಮದೇವಿ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸತತವಾಗಿ ಎಂಟು ದಿನ ನಡೆಯುವ ಜಾತ್ರೆಯಲ್ಲಿ, ಮುಖ್ಯ ಆಚರಣೆಯಾದ ಅಗ್ನಿ ಕೊಂಡ ಮಹೋತ್ಸವವು ಭಾನುವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಅಗ್ನಿ ಕೊಂಡ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಕೆಂಪಮ್ಮದೇವಿ ಹಾಗೂ ನೇರಳೆಕೆರೆ ಅಮ್ಮನವರ ಮೂರ್ತಿಗಳ ಜೊತೆ ಗ್ರಾಮದ ಮಹಿಳೆಯರು ಆರತಿ ಹೊತ್ತು ಸಾಗಿದರು. ಆರತಿ ಉತ್ಸವದೊಂದಿಗೆ ನಂದಿ ಧ್ವಜ, ಲಿಂಗದ ವೀರರ ಕುಣಿತ, ಸೋಮನ ಕುಣಿತಗಳ ಮೆರವಣಿಗೆಯನ್ನು ಮಾಡಲಾಯಿತು. ನಿಗದಿಯಾದ ಸಮಯದಲ್ಲಿ ಅಗ್ನಿಕೊಂಡದ ಬಳಿ ತಲುಪಿ ಅಗ್ನಿಕೊಂಡಕ್ಕೆ ಪೂಜೆ ಸಲ್ಲಿಸಿ ದೇವಿಗೆ ಮಂಗಳಾರತಿ ಮಾಡಲಾಯಿತು. ಮಹೋತ್ಸವದಲ್ಲಿ ಗ್ರಾಮದ ಮುಖಂಡರು ಹಾಗೂ ದೇವಾಸ್ಥಾನದ ಅರ್ಚಕರ ಸಮ್ಮುಖದಲ್ಲಿ ಆರತಿ ಹಾಗೂ ದೇವರ ಮೂರ್ತಿಗಳು ಅಗ್ನಿ ಕೊಂಡದಲ್ಲಿ ಸಾಗಿದ ನಂತರ ಭಕ್ತರು ಅಗ್ನಿಕೊಂಡ ತುಳಿಯುವ ಮೂಲಕ ಹರಕೆ ತೀರಿಸಿದರು.