
ಗುಬ್ಬಿ ಪೊಲೀಸರು ಕಳ್ಳರು ದೋಚಿದ್ದ ಒಂದು ಚಿನ್ನದ ಬ್ರಾಸ್ಲೆಟ್ ಸೇರಿ ಒಟ್ಟು 16 ಲಕ್ಷ ಮೌಲ್ಯದ ಹಣವನ್ನ ವಶಪಡಿಸಿಕೊಂಡಿದ್ದಾರೆ.ತುಮಕೂರು
ಗುಬ್ಬಿ :
ಓಜಿ ಕುಪ್ಪಂ ಗ್ಯಾಂಗ್.. ಅದು ಅಂತಿಂಥ ಗ್ಯಾಂಗ್ ಅಲ್ಲ.. ಹೆಸರು ಕೇಳಿದ್ರೇನೆ ಭಯಪಡುವಷ್ಟರ ಮಟ್ಟಿಗೆ ಭಯಾನಕ ಗ್ಯಾಂಗ್ ಅದು.. ಒಂದು ಸಲ ಕಣ್ಣಿಟ್ರೆ ಸಾಕು ಕಣ್ಮುಚ್ಚಿ ಕಣ್ಣು ಬಿಡೋದ್ರಲ್ಲಿ, ಲಕ್ಷ ಲಕ್ಷ ಹಣವನ್ನು ಎಗರಿಸಿ ಪರಾರಿಯಾಗ್ತಿದ್ದ ಗ್ಯಾಂಗ್ ಅದು. ಕೇವಲ ನಮ್ಮ ರಾಜ್ಯ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲಿಯೂ ಆಕ್ಟಿವ್ ಆಗಿರೋ ಈ ಗ್ಯಾಂಗ್‌ನ ಸದಸ್ಯರು ಇತ್ತೀಚೆಗಷ್ಟೇ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ತಮ್ಮ ಕರಾಮತ್ತು ತೋರಿಸಿಬಿಟ್ಟಿದ್ದರು. ಹೀಗಾಗಿ ಈ ಖತರ್ನಾಕ್ ಗ್ಯಾಂಗ್ ನ ಬೆನ್ನಟ್ಟಿದ್ದ ಗುಬ್ಬಿ ಪೊಲೀಸರು ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಬ್ಬಿ ಪಟ್ಟಣದ ಎಪಿಎಂಸಿ ಆವರಣದ ಕಚೇರಿ ಮುಂಭಾಗ, ಹಾಡಹಾಗಲೇ ಕಾರಿನ ಕಿಟಕಿ ಒಡೆದು ಕಾರಿನಲ್ಲಿದ್ದ ಈ ಗ್ಯಾಂಗ್ ಇಬ್ಬರು ಖತರ್ನಾಕ್ ಖದೀಮರು ಬರೋಬ್ಬರಿ 15 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ, ಕೊನೆಗೂ ಅಂತರ್ ರಾಜ್ಯ ಓಜಿ ಕುಪ್ಪಂ ಗ್ಯಾಂಗ್ ನ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 7 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಶಿವರಾಜು ಎಂಬುವರು ತಮ್ಮ ಬ್ಯಾಂಕ್ ಖಾತೆಯಿಂದ 15 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ತನ್ನ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗುಬ್ಬಿ ಎಪಿಎಂಸಿ ಯಾರ್ಡ್ ನ ಎಪಿಎಂಸಿ ಕಚೇರಿ ಮುಂಭಾಗ ಕಾರನ್ನು ನಿಲ್ಲಿಸಿ, ಕಚೇರಿಗೆ ಹೋಗಿ ವಾಪಸ್ ಬರುವುದರೊಳಗೆ 15 ಲಕ್ಷ ನಗದು ಹಣ ಕಳವಾಗಿತ್ತು, ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿರಾ ಡಿವೈಎಸ್ಪಿ ಶೇಖರ್ ಮಾರ್ಗದರ್ಶನದಲ್ಲಿ ಗುಬ್ಬಿ ವೃತ್ತ ನಿರೀಕ್ಷಕರಾದ ರಾಘವೇಂದ್ರ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಆಂದ್ರ ಪ್ರದೇಶದ ಓಜಿ ಕುಪ್ಪಂ ನಿವಾಸಿಗಳಾದ 44 ವರ್ಷದ ಶಿವ ಬಿನ್ ಲೇಟ್ ಗೋಪಾಲ್ ಮತ್ತು 38 ವರ್ಷದ ಸುಬ್ರಹ್ಮಣ್ಯ ಅಲಿಯಾಸ್ ಮಣಿ ಬಿನ್ ಪಾಪಯ್ಯ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ಅಂತರ್ ರಾಜ್ಯ ಅಪರಾಧಿಗಳಾಗಿದ್ದು, ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಐದು ಪ್ರಕರಣಗಳಲ್ಲಿ ದೋಚಿದ್ದ ಸುಮಾರು 13.60 ಲಕ್ಷ ನಗದು ಹಣ ಹಾಗೂ ಒಂದು ಚಿನ್ನದ ಬ್ರಾಸ್ಲೈಟ್ ಸೇರಿ ಒಟ್ಟು 16 ಲಕ್ಷ ಮೌಲ್ಯದ ಹಣವನ್ನು ಗುಬ್ಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂಕಯ್ಯ, ಕಿರಣ್ ಮತ್ತು ರಾಜಶೇಖರಯ್ಯ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗುಬ್ಬಿ ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ತುಮಕೂರು ಎಸ್‌ಪಿ ಕೆವಿ ಅಶೋಕ್ ವೆಂಕಟ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.