ಗುಬ್ಬಿ : ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಮಳೆಯ ನಡುವೆಯು ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಪತ್ರೆ ಮತ್ತಿಘಟ್ಟ ಗ್ರಾಮದ ಜೋಡಿ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ಜರುಗಿತು. ಪತ್ರೆ ಮತ್ತಿಘಟ್ಟ ಗ್ರಾಮದ ಸುತ್ತಮುತ್ತಲ ಹಲವು ಗ್ರಾಮಗಳ ಸಾವಿರಾರು ಜನರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಜೋಡಿ ಬಸವೇಶ್ವರ ಸ್ವಾಮಿ ನೂತನ ದೇವಾಲಯದ ಗೋಪುರ ಹಾಗೂ ಕಳಶ ಪ್ರತಿಷ್ಠಾಪನೆಯನ್ನು ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಮಹಾಸ್ವಾಮಿಜಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಪ್ರತಿವರ್ಷವೂ ಬಹಳ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ. ಅದರಂತೆ ಈ ವರ್ಷ ಬಹಳ ವಿಶೇಷವಾಗಿ ಕಳಶ ಸ್ಥಾಪನೆ ಸೇರಿದಂತೆ ಗೋಪುರ ನಿರ್ಮಾಣ ಮಾಡಿರುವುದು ಅತ್ಯಂತ ಹೆಚ್ಚು ಖುಷಿ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಕಳಶ ಗೋಪುರದ ನಿರ್ಮಾತೃ ರಾಜು ಅವರ ಕುಟುಂಬ ಗೋಪುರ ನಿರ್ಮಿಸಿಕೊಟ್ಟಿದ್ದು ಬಹಳ ವಿಶೇಷವಾಗಿದ್ದು ಭಕ್ತರ ಗಮನಸೆಳೆಯುತ್ತಿದೆ. ದೇವಾಲಯದ ಮುಂಭಾಗ ಹೋಮ ಹವನಗಳನ್ನು ಮಾಡಲಾಯಿತು. ನೂರಾರು ಮಹಿಳೆಯರು ಕುಂಭವನ್ನು ಹೊತ್ತು ದೇವರಿಗೆ ಪೂಜೆ ಸಲ್ಲಿಸಿದರು. ದೇವಾಲಯ ಸುತ್ತ ನೆರೆದಿದ್ದ ಜನರು ಜಾತ್ರಮಹೋತ್ಸವನ್ನು ಕಂಡು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಮಹದೇವಯ್ಯ, ದಿನೇಶ್, ಹೇಮಂತ್ ಕುಮಾರ್, ರಾಜು, ಎಂ.ಸಿ ರಾಜ್, ಅರ್ಚಕ ನಂಜೇಗೌಡ ಸೇರಿದಂತೆ ಜೋಡಿ ಬಸವೇಶ್ವರ ಕಮಿಟಿಯ ಸೇವಾ ಅಭಿವೃದ್ಧಿ ಟ್ರಸ್ಟ್ ನ ಸದಸ್ಯರು ಹಾಜರಿದ್ದರು.