ಗುಬ್ಬಿ :
ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಹಲವು ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಸಾಕು ಪ್ರಾಣಿಗಳನ್ನು ಬಲಿ ಪಡೆದು, ರೈತರ ನಿದ್ದೆಗೆಡಿಸಿದ್ದ ಭಕ್ಷಕ ಚಿರತೆ ಅಂತೂ ಇಂತೂ ಕೊನೆಗೂ ಸೆರೆಸಿಕ್ಕಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕಡಬಾ ಹೋಬಳಿ ಮಂಚಿಹಳ್ಳಿ ಗ್ರಾಮದ ಬಳಿ ಸುಮಾರು ಐದು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದ ಬೋನಿಗೆ ಬಿದ್ದಿದೆ. ಈ ಭಕ್ಷಕ ಚಿರತೆ ಕಳೆದ ಎರಡು ತಿಂಗಳ ಹಿಂದೆ ಕಡಬಾ ಹೋಬಳಿ ಕರೇಗೌಡನಪಾಳ್ಯ ಗ್ರಾಮದಲ್ಲಿ ಎರಡು ವರ್ಷದ ಕರುವನ್ನ ಬಲಿ ಪಡೆದಿತ್ತು, ನಂತರ ಇದೇ ಹೋಬಳಿಯ ಬ್ಯಾಡಗೆರೆ ಗ್ರಾಮದಲ್ಲಿ ಕರುವನ್ನು ಎತ್ತೊಯ್ದು ಬಲಿ ಪಡೆದಿದ್ದು, ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವಂತಹ ಭೀತಿ ಉಂಟಾಗಿತ್ತು. ಅಲ್ಲದೇ ಆಗಾಗ ದನಕರುಗಳ ಮೇಲೆ ದಾಳಿ ನಡೆಸ್ತಿದ್ದ ಚಿರತೆಯ ಉಪಟಳ ತಪ್ಪಿಸುವಂತೆ ಅರಣ್ಯ ಇಲಾಖೆ ಚುರುಕುಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರು.
ಗ್ರಾಮಸ್ಥರ ಮನವಿಯ ಮೇರೆಗೆ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದು, ಚಿರತೆ ಸೆರೆಗೆ ಮುಂದಾಗಿದ್ರು. ಇದೀಗ ಕೊನೆಗೂ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆಸಿಕ್ಕಿರೋದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.