ಗುಬ್ಬಿ:
ಕಾಂಗ್ರೇಸ್ ಸರ್ಕಾರವೇನೋ ಕೊಟ್ಟ ಭರವಸೆಯಂತೆ ಐದೂ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದೆ. ಆದರೆ ಈ ಗ್ಯಾರೆಂಟಿ ಭಾಗ್ಯಗಳನ್ನು ಕೊಟ್ಟು ಸರ್ಕಾರ ಬಡವಾಗಿ ಹೋಯ್ತಾ ಅನ್ನೋ ಅನುಮಾನಗಳು ಮೂಡುತ್ತಿವೆ. ಕಾರಣ ರಸ್ತೆ ಗುಂಡಿ ಮುಚ್ಚೋದಕ್ಕೂ ಸರ್ಕಾರದ ಬಳಿ ಹಣ ಇಲ್ಲ ಎನ್ನುವಂತಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡೆಗೆ ಬೇಸತ್ತ ಗ್ರಾಮಸ್ಥರು, ಸರ್ಕಾರಕ್ಕೇ ಸೆಡ್ಡು ಹೊಡೆದು ತಾವೇ ಚಂದಾ ಸಂಗ್ರಹ ಮಾಡಿ ರಸ್ತೆಯನ್ನು ದುರಸ್ಥಿ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮಸ್ಥರೇ ಸೇರಿಕೊಂಡು ಗ್ರಾಮದಿಂದ ಹಣ ಸಂಗ್ರಹಿಸಿ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದ ರಸ್ತೆಯನ್ನು ಸರಿಪಡಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮೆಳೆಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೆಳೆಕಲ್ಲಹಳ್ಳಿ ಗ್ರಾಮದ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿತ್ತು. ರಸ್ತೆಯನ್ನು ಸರಿಪಡಿಸುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಅದಕ್ಕೆಲ್ಲಾ ಹಣವಿಲ್ಲ ಎಂದಿದ್ದರು. ಹೀಗಾಗಿ ಗ್ರಾಮಸ್ಥರು ಚಂದಾ ಸಂಗ್ರಹ ಮಾಡಿ ರಸ್ತೆಗೆ ಮಣ್ಣು ಹಾಕಿ ರಸ್ತೆ ಸರಿಪಡಿಸಿದ್ದಾರೆ.
ಸುಮಾರು 2ರಿಂದ 3ಲಕ್ಷ ಹಣ ಸಂಗ್ರಹಿಸಿ ಸುಮಾರು 2 ಕಿಲೋಮೀಟರ್ ದೂರ ಗುಂಡಿ ಬಿದ್ದ ರಸ್ತೆಯನ್ನು ಸರಿಪಡಿಸಿದ್ದಾರೆ. ಅಲ್ಲದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡೆಗೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.