ಗುಬ್ಬಿ:
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವರದೇನಹಳ್ಳಿ ಜಯಣ್ಣ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ತಾಲ್ಲೂಕು ಪಂಚಾಯಿತಿ ಇ.ಓ ಶಿವಪ್ರಕಾಶ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀನಿವಾಸಮೂರ್ತಿ ನೀಡಿದ ರಾಜೀನಾಮೆ ಹಿನ್ನಲೆ ತೆರವಾದ ಹಿಂದುಳಿದ ವರ್ಗದ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ವರದೇನಹಳ್ಳಿ ಸದಸ್ಯ ಜಯಣ್ಣ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷ ಜಯಣ್ಣ ಮಾತನಾಡಿ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಅಭಿವೃದ್ದಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು