ಗುಬ್ಬಿ :
ಎರಡು ದಿನದ ಹಿಂದಷ್ಟೇ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು, ಇಂದು ಅದೇ ಜಾಗದಲ್ಲಿ ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನ ಕಾಲು ಮುರಿದಿರೋ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಕುಂದರನಹಳ್ಳಿ ಗೇಟ್ ನಲ್ಲಿ ನಡೆದಿದೆ. ಎರಡು ದಿನದ ಅಂತರದಲ್ಲಿ ಒಂದೇ ಜಾಗದಲ್ಲಿ ಎರಡೇರಡು ಅಪಘಾತಗಳು ನಡೆದಿದ್ದು ಆಕ್ಸಿಡೆಂಟ್ ಸ್ಪಾಟ್ ಆಯ್ತಾ ಎಂಬ ಅನುಮಾನ ಎದ್ದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಎರಡು ದಿನದ ಹಿಂದೆ ಮಗಳ ಮದುವೆಗೆ ಹೋಗಿ ಬರುವಾಗ ನಿಟ್ಟೂರು ಬಳಿಯ ಕುಂದರನಹಳ್ಳಿ ಗೇಟ್ ಬಳಿ ಕ್ಯಾಂಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಜಿ.ಹೊಸಹಳ್ಳಿ ಗ್ರಾಮದ ಮಂಜುನಾಥ್ ಎಂಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಘಟನೆ ಮಾಸುವ ಮುನ್ನವೇ ಇಂದು ಅದೇ ಕುಂದರನಹಳ್ಳಿ ಗೇಟ್ ಬಳಿಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹುಚ್ಚಯ್ಯ ಎಂಬಾತ ಟಿವಿಎಸ್ ಎಕ್ಸೆಲ್ ಅಲ್ಲಿ ಹೋಗ್ತಿದ್ದ ವೇಳೆ ಲಾರಿಯೊಂದು ಯು ಟರ್ನ್ ಮಾಡುವ ತಿರುವಿನಲ್ಲಿ ಹಿಂಬದಿಯಿಂದ ಬಂದು ಬೈಕ್ ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಟಿವಿಎಸ್ ಎಕ್ಸೆಲ್‌ನಲ್ಲಿದ್ದ ಸವಾರನ ಕಾಲು ಮೂಳೆ ಮುರಿದಿದೆ. ಜೊತೆಗೆ ತೀವ್ರ ರಕ್ತಸ್ರಾವವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಈ ಕುಂದರನಹಳ್ಳಿ ಗೇಟ್ ಬಳಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಈ ಭಾಗದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧ ಪಟ್ಟ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತು, ಈ ಜಾಗದಲ್ಲಿ ಮತ್ತೆ ಅಪಘಾತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರು ಆಗ್ರಹಿಸ್ತಾ ಇದ್ದಾರೆ.