ಕೊರಟಗೆರೆ :
ಹಣ ಅಂದರೆ ಹೆಣವೂ ಬಾಯಿಬಿಡುತ್ತೆ ಅನ್ನೋ ಮಾತೇ ಇದೆ. ದುಡ್ಡಿಗಾಗಿ ಜನರು ಈಗ ಏನು ಬೇಕಾದರೂ ಮಾಡೋದಕ್ಕೆ ತಯಾರಾಗುತ್ತಿದ್ದಾರೆ. ಇಷ್ಟು ದಿನ ಬೇರೆಯವರ ದುಡ್ಡು, ಆಸ್ತಿಯನ್ನು ಲಪಟಾಯಿಸುತ್ತಿದ್ದ ಜನರು ಈಗ ದೇವರ ಹಣ, ಒಡವೆಯ ಮೇಲೆಯೂ ಕಣ್ಣು ಹಾಕ್ತಿದ್ದಾರೆ. ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ಗೋಲ್ಮಾಲ್ ಮಾಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ವೀರನಾಗಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಕೆಲವರು ಈ ದೇವಸ್ಥಾನದ ಹೆಸರಿನಲ್ಲಿ ಒಂದು ಟ್ರಸ್ಟ್ ರಚಿಸಿಕೊಂಡು, ದೇವಿಯ ಬಂಗಾರ, ಬೆಳ್ಳಿ, ಧವಸ ಧಾನ್ಯ ಮತ್ತು ಲಕ್ಷಾಂತರ ರೂಪಾಯಿ ಹಣವನ್ನು ಗೋಲ್ಮಾಲ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಶ್ರೀ ವೀರನಾಗಮ್ಮ ದೇವಸ್ಥಾನದ ಟ್ರಸ್ಟ್ ಸದಸ್ಯರ ವಿರುದ್ಧ ಧಾರ್ಮಿಕ ದತ್ತಿ ಇಲಾಖೆಗೆ ವೀರಕ್ಯಾತಯ್ಯ ಎಂಬುವರು ದೂರು ನೀಡಿದ್ದಾರೆ. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕರು, ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರು ಸೇರಿ ತನಿಖೆ ನಡೆಸಿದ್ದಾರೆ. ಈ ತನಿಖೆಯಲ್ಲಿ ಅಕ್ರಮ ದೃಢಪಟ್ಟ ಹಿನ್ನೆಲೆ ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ರದ್ದು ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ವಡ್ಡಗೆರೆಯ ಸುಪ್ರಸಿದ್ದ ಶ್ರೀ ವೀರನಾಗಮ್ಮ ದೇವಿ ದೇವಾಲಯದ ಹೆಸರಿನಲ್ಲಿ 2006ರಲ್ಲಿ ಶ್ರೀ ವೀರನಾಗಮ್ಮ ದೇವಸ್ಥಾನ ಟ್ರಸ್ಟ್ ಸ್ಥಾಪನೆ ಮಾಡಿಕೊಂಡಿದ್ರು. ಈ ಟ್ರಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಮಾಡಿರೋದು ಇದೀಗ ಬೆಳಕಿಗೆ ಬಂದಿದೆ. ವೀರನಾಗಮ್ಮ ದೇವಿಗೆ ಭಕ್ತರು ನೀಡುವ ಚಿನ್ನ, ಬೆಳ್ಳಿ, ಹಣಕ್ಕೆ ರಸೀದಿಯನ್ನೇ ನೀಡದಂತೆ ಅಕ್ರಮವಾಗಿ ಹಣ ಸಂಗ್ರಹಣೆ ಮಾಡಿರೋದು ಗೊತ್ತಾಗಿದೆ. ಜೊತೆಗೆ ಈ ಟ್ರಸ್ಟ್‌ನ ಸದಸ್ಯರು ದೇವಿಯ ಬಂಗಾರ, ಹಣ ಮತ್ತು ನಗದು ಹಣವನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿರೋದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇನ್ನು 2006ರಲ್ಲಿ ಅನಧೀಕೃತವಾಗಿ ರಚನೆ ಆಗಿರುವ ಶ್ರೀ ವೀರನಾಗಮ್ಮ ದೇವಾಲಯದ ಟ್ರಸ್ಟ್‌ನಲ್ಲಿ ಹಣದ ವಹಿವಾಟಿನ ದಾಖಲೆಗಳೇ ಇಲ್ವಂತೆ. ಬೆಂಗಳೂರು, ತುಮಕೂರು ಮತ್ತು ಕೊರಟಗೆರೆಯ 8 ಬ್ಯಾಂಕುಗಳಲ್ಲಿ ಈ ಟ್ರಸ್ಟ್ ಖಾತೆಗಳನ್ನು ಹೊಂದಿದೆಯಂತೆ. ತಹಶೀಲ್ದಾರ್ ಗಮನಕ್ಕೆ ತರದಂತೆ ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ವ್ಯವಹಾರ ಮಾಡಿರುವ ವಿಚಾರ ತನಿಖೆಯಿಂದ ದೃಢಪಟ್ಟಿದೆ. ಬಂಗಾರ, ಬೆಳ್ಳಿ ಮತ್ತು ನಗದು ಹಣವನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಟ್ರಸ್ಟ್ ಸದಸ್ಯರ ವಿರುದ್ದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕೆಂಡಾ ಮಂಡಲರಾಗಿದ್ದಾರೆ. ಜೊತೆಗೆ ಚಿನ್ನ, ಬೆಳ್ಳಿ, ನಗದು ಹಣ, ಬ್ಯಾಂಕ್ ಖಾತೆ ಮತ್ತು ದಾಖಲೆ ಸೇರಿದಂತೆ ಟ್ರಸ್ಟಿನ ರಸೀದಿಗಳನ್ನು ಧಾರ್ಮಿಕ ದತ್ತಿ ಇಲಾಖೆ ಸೀಜ್ ಮಾಡಿದೆ.
ಅಷ್ಟೇ ಅಲ್ಲ, ಅನಧೀಕೃತ ಟ್ರಸ್ಟನ್ನು ರದ್ದು ಮಾಡಿ ಆದೇಶ ಹೊರಡಿಸಿರುವ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಈ ಟ್ರಸ್ಟ್‌ನ ಕಚೇರಿಯನ್ನು ಕೂಡ ಸೀಜ್ ಮಾಡಿ, ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ಕೊರಟಗೆರೆ ತಹಶೀಲ್ದಾರ್ ಅವರಿಗೆ ನೀಡಿದ್ದಾರೆ. ಜೊತೆಗೆ ಸಂಪೂರ್ಣ ತನಿಖೆ ನಡೆಸಿ, ಟ್ರಸ್ಟ್‌ನ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.